ಒತ್ತುವರಿ ತೆರವಿಗೆ ದಂಪತಿ ವಿರೋಧ: ಆತ್ಮಾಹುತಿ ಬೆದರಿಕೆ

Social Share

ಬೆಂಗಳೂರು,ಅ.12- ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ದಿನವು ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು, ತೆರವಿಗೆ ಬಂದಿದ್ದ ಪಾಲಿಕೆ ಅಧಿಕಾರಿಗಳಿಗೆ ದಂಪತಿ ಶಾಕ್ ನೀಡಿದ್ದಾರೆ. ಮನೆ ತೆರವು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವು ದಾಗಿ ಬಸವನಪುರ ಮುಖ್ಯರಸ್ತೆಯ ಎಸ್‍ಆರ್‍ ಲೇಔಟ್‍ನ ಸೋನಾ ಸಿಂಗ್ ಹಾಗೂ ಸುನೀಲ್ ಸಿಂಗ್ ದಂಪತಿ ಕೈಯಲ್ಲಿ ಪೆಟ್ರೋಲ್ ಹಿಡಿದು ಮೈಮೇಲೆ ಸುರಿದುಕೊಂಡು ರಂಪಾಟ ಮಾಡಿದ್ದಾರೆ. ನಾವು ಇಲ್ಲಿಯವರೆ.

ಇಲ್ಲೇ ಹುಟ್ಟಿ ಬೆಳೆದಿದ್ದೇವೆ. ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು. ನಾವೇನು ಪಾಕಿಸ್ತಾನದಿಂದ ಬಂದಿದ್ದೇವಾ? ನಾವು ಕರ್ನಾಟಕದ ಜನರೇ. ನಮಗೇಕೆ ಇಷ್ಟೊಂದು ತೊಂದರೆ ಕೊಡುತ್ತೀರ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಾವು ಮನೆಯನ್ನು ಲೋನ್ ತೆಗೆದುಕೊಂಡು ಕಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಮನೆಯನ್ನು ಒಡೆಯಲು ಬಿಡುವುದಿಲ್ಲ. ಸ್ಥಳಕ್ಕೆ ಸಿಎಂ ಬರಬೇಕು. ಮನೆಯ ಮೇಲೆ 40 ಲಕ್ಷ ಲೋನ್ ಇದೆ. 20 ವರ್ಷದಿಂದ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಬೇಕಾದರೆ ಒತ್ತುವರಿಯಾಗಿದ್ದರೆ ಕಾಂಪೌಂಡ್ ಒಡೆದುಕೊಳ್ಳಿ. ಅದನ್ನು ಬಿಟ್ಟು ಮನೆಗೆ ಏಕೆ ಡ್ಯಾಮೇಜ್ ಮಾಡುತ್ತೀದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ವರ್ಷ ಕೋವಿಡ್‍ನಿಂದ ನರಳಿದ್ದೇವೆ. ಈಗ ಒತ್ತುವರಿ ತೆರವಿನಿಂದ ಸಾಯಬೇಕಾ? ಸ್ಥಳಕ್ಕೆ ಸಿಎಂ ಬರಲೇಬೇಕು ಎಂದು ಹಠ ಹಿಡಿದು ದಂಪತಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡರು.

ಸುದ್ದಿ ತಿಳಿಯುತ್ತಿದ್ದಂತೆ ವೈಟ್‍ಫೀಲ್ಡ್ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಸ್ಥಳಕ್ಕೆ ದೌಡಾಯಿಸಿ ದಂಪತಿಯ ಮನವೊಲಿಸಲು ಪ್ರಯತ್ನಿಸಿದರು. ಅವರ ಮಾತಿಗೂ ಬಗ್ಗದೆ ಪ್ರತಿಭಟನೆಯನ್ನು ಮುಂದುವರೆಸಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು.

ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಮತ್ತು ಎಸಿಪಿ ಶಾಂತಮಲ್ಲಪ್ಪ ಸ್ಥಳಕ್ಕೆ ದೌಡಾಯಿಸಿ ಜಂಟಿಯಾಗಿ ದಂಪತಿಯ ಮನವೊಲಿಸಲು ಹರಸಾಹಸಪಡಬೇಕಾಯಿತು.

ದಂಪತಿ ವಶಕ್ಕೆ: ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರಿನ ಟ್ಯಾಂಕರ್ ತರಿಸಿ ದಂಪತಿಗಳ ಮೇಲೆ ನೀರು ಸಿಂಪಡಿಸಿ ಮೋರಿಯ ಮೇಲಿಂದ ಇಬ್ಬರನ್ನು ಮೇಲೆಕ್ಕೆತ್ತಿ ನಂತರ ಕೆ.ಆರ್.ಪುರ ಠಾಣೆ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಬಿಬಿಎಂಪಿ ಅಧಿಕಾರಿಗಳು ದೂರು ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಮನೆ ತೆರವು: ದಂಪತಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದ ನಂತರ ಇತ್ತ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿ ಮನೆಯ ಒತ್ತುವರಿ ತೆರವುಗೊಳಿಸಿದರು. ನಡೆಸಿದರು. ಪ್ರತಿದಿನ ಒತ್ತುವರಿ ಕಾರ್ಯಾಚರಣೆ ವೇಳೆ ಒಂದಿಲ್ಲೊಂದು ಹೈಡ್ರಾಮಾ, ಅಡ್ಡಿ ಹಾಗೂ ಮಾತಿನ ಸಮರಗಳು ನಡೆಯುತ್ತಲೇ ಇವೆ.

ಸೆಂಟಿಮೆಂಟ್‍ಗೆ ಅವಕಾಶವಿಲ್ಲ: ಕಾನೂನಿನಲ್ಲಿ ಸೆಂಟಿಮೆಂಟ್‍ಗೆ ಅವಕಾಶವಿಲ್ಲ. ನಿನ್ನೆಯಿಂದಲೂ ದಂಪತಿ ಇದೇ ರೀತಿ ಗಲಾಟೆ ಮಾಡುತ್ತಿದ್ದಾರೆ. ಮಳೆ ಬಂದು ಮಗುವೊಂದು ಕಾಲುವೆಯಲ್ಲಿ ಕೊಚ್ಚಿ ಹೋಗಿತ್ತು. ಹಾಗಾಗಿ ಒತ್ತುವರಿ ತೆರವು ಅನಿವಾರ್ಯ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಸ್ಪಷ್ಟನೆ ನೀಡಿದ್ದಾರೆ.

ಕೆಆರ್‍ಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ದಂಪತಿಯ ಆತ್ಮಹತ್ಯೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ರೀತಿ ಮಾಡಬಾರದು. ಅವರ ಮನೆ ಒತ್ತುವರಿಯಾಗಿದೆ. ಹಾಗಾಗಿ ತೆರವು ಮಾಡಬೇಕಾಗಿದೆ. ಒಂದು ವೇಳೆ ಇವರ ಮನೆಯನ್ನು ತೆರವು ಮಾಡದೇ ಬಿಟ್ಟರೆ ಉಳಿದವರು ಸುಮ್ಮನೆ ಬಿಡುತ್ತಾರ? ಎಂದು ಪ್ರಶ್ನಿಸಿದ್ದಾರೆ.

Articles You Might Like

Share This Article