ಬೆಂಗಳೂರು,ಆ.22-ರಾಜ್ಯದೆಲ್ಲೆಡೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಜೊತೆ ನಗರಾಭಿೃದ್ಧಿ ಇಲಾಖೆ ಕೈಜೋಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಇದುವರೆಗೂ 4055 ಮಂದಿಗೆ ಡೆಂಘಿಯಿಂದ ಬಳಲುತ್ತಿರುವುದು ದೃಢಪಟ್ಟಿದ್ದು, ಅವರ ಪೈಕಿ ರೋಗದಿಂದ ಮುಕ್ತರಾಗದೇ 8 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲಾಗಳಲ್ಲಿ ವಿಪರೀತ ಮಳೆ ಹಾಗು ಹವಾಮಾನ ವೈಪರೀತ್ಯದಿಂದಾಗಿ ಡೆಂಘಿ ರೋಗಕ್ಕೆ ಕಾರಣವಾಗಿರುವ ಈಡಿಸ್ ಈಜಿಪ್ಪಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿರುವುದರಿಂದ ಎಲ್ಲೆಡೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಡೆಂಘಿ ಹಾಗೂ ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳಿಗೆ ಯಾವುದೇ ನಿರ್ದಿಷ್ಟ ಲಸಿಕೆಯಾಗಲಿ ಚಿಕಿತ್ಸೆಯಾಗಲಿ ಎಲ್ಲ ಎನ್ನುವುದು ವಿಶೇಷ.
ಹೀಗಾಗಿ ಸಾಂಕ್ರಾಮಿಕ ರೋಗಗಳಿಂದ ಬಚಾವಾಗಬೇಕಾದರೆ, ಸೊಳ್ಳೆ ಕಾಟ ತಪ್ಪಿಸುವುದರ ಜೊತೆಗೆ ಸೊಳ್ಳೆ ಕಚ್ಚದ್ದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಆರೋಗ್ಯ ಇಲಾಖೆಯೊಂದಿಗೆ ನಗರಾಭಿವೃದ್ಧಿ ಇಲಾಖೆ ಕೈ ಜೊಡಿಸಿ ಸೊಳ್ಳೆ ಕಾಟ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಏನು ಮಾಡಬೇಕು: ಸಾಂಕ್ರಾಮಿಕ ರೋಗದಿಂದ ಬಚಾವಾಗಬೇಕಾದರೆ ಕೆಲವು ಮುನ್ಸೂಚನೆಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ. ಕುಡಿಯುವ ನೀರಿನ ಸಮರ್ಪಕ ಸರಬರಾಜು ಹಾಗು ನಿರ್ವಹಣೆ ಮಾಡಬೇಕು.
ನಿರುಪಯುಕ್ತ ಹಾಗು ಘನತ್ಯಾಜ್ಯ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು.
ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ಸಂಗ್ರಹ ತಡೆಗಟ್ಟಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಮನೆ ಮುಂದೆ ಕಲುಷಿತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಉತ್ಪಾದನಾ ಕೇಂದ್ರಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡುವುದರ ಜೊತೆಗೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಹೂ ಕುಂಡಗಳಲ್ಲಿ, ತೆಂಗಿನ ಚಿಪ್ಪು ಮತ್ತಿತರ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತುರ್ತು ಸಂದರ್ಭಗಳಲ್ಲಿ ಇಂಡೋರ್ ಸ್ಪೇಸ್ ಸ್ಪ್ಪ್ರೆ ಬಳಸುವಂತೆ ಸಲಹೆ ನೀಡಲಾಗಿದೆ.