ಬೆಂಗಳೂರು,ಡಿ.16-ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆಯಾದ ಬೆನ್ನಲ್ಲೇ ಬೆಂಗಳೂರಲ್ಲಿ ಡೆಂಘೀ ಸೋಂಕು ಉಲ್ಬಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಝೀಕಾ ವೈರಸ್ ಸೋಂಕಿನ ಲಕ್ಷಣಗಳೂ ಡೆಂಘೀ ಮಾದರಿಯಲ್ಲೇ ಇರುವುದರಿಂದ ನಗರಕ್ಕೂ ಝೀಕಾ ಸೋಂಕು ಕಾಲಿಡಬಹುದು ಎಂಬ ಆತಂಕದಿಂದ ಬಿಬಿಎಂಪಿ ಅರೋಗ್ಯಾಧಿಕಾರಿಗಳಿಗೆ ಟೆನ್ಷನ್ ಹೆಚ್ಚಾಗಿದೆ.
ಮಾಂಡೂಸ್ ಚಂಡಮಾರುತದ ಎಫೆಕ್ಟ್‍ನಿಂದಾಗಿ ನಗರದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತುತ್ತಲೆ ಇದೆ. ಪ್ರತಿನಿತ್ಯ ನಗರದಲ್ಲಿ 50ಕ್ಕೂ ಹೆಚ್ಚು ಡೆಂಘೀ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಝೀಕಾ ಸೋಂಕು ಭೀತಿ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ.
ಡೆಂಘೀ ಜ್ವರಕ್ಕೆ ಕಾರಣವಾಗಿರುವ ಈಡೀಸ್ ಈಜಿಪ್ಪಿ ಜಾತಿಯ ಸೊಳ್ಳೆ ಕಚ್ಚುವುದರಿಂದಲೇ ಝೀಕಾ ವೈರಸ್ ಸೋಂಕು ತಗಲುತ್ತಿರುವುದರಿಂದ ಆರೋಗ್ಯಾಧಿಕಾರಿಗಳು ಝೀಕಾ ಸೋಂಕು ಹರಡುವಿಕೆ ಬಗ್ಗೆ ಹದ್ದಿನಕಣ್ಣಿಟ್ಟಿದ್ದಾರೆ.
10ರ ಓಲೈಕೆಗೆ ಮುಂದಾದರೆ 90 ಕೈತಪ್ಪೀತು ಜೋಕೆ : ಶ್ರೀರಾಮುಲು
ಕಳೆದ ಒಂದು ವಾರದ ಅಂತರದಲ್ಲಿ 1982 ಡೆಂಗ್ಯೂ ಕೇಸ್ ಗಳು ಪತ್ತೆಯಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ.30ರಷ್ಟು ಏರಿಕೆಯಾಗಿರುವುದು ಕಂಡು ಬಂದಿದೆ. ಜಿಟಿಜಿಟಿ ಮಳೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಡೆಂಘೀ ಜೊತೆ ಝೀಕಾ ಭೀತಿಯೂ ಎಲ್ಲರನ್ನೂ ಕಾಡುತ್ತಿದೆ.
ಐದು ಮಂದಿ ಬಲಿ: ಕಳೆದ ಒಂದು ವಾರದಲ್ಲಿ ಡೆಂಘೀ ಜ್ವರಕ್ಕೆ ರಾಜ್ಯದಾದ್ಯಂತ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಸನ, ವಿಜಯಪುರ, ಧಾರವಾಡ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನಿತರ ಹಲವಾರು ಮಂದಿ ಡೆಂಘೀ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಸಾವು-ನೋವು ಹೆಚ್ಚಾಗುವ ಸಂಭವವಿದೆ.
ಡೆಂಘಿ ಇದರ ಲಕ್ಷಣಗಳೇನು?
ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಪಿ ಸೊಳ್ಳೆಗಳೇ ಡೆಂಘೀ ಜ್ವರ ಹರಡಲು ಮೂಲ ಕಾರಣವಾಗಿದೆ.
ಸಂಗ್ರಹಿಸಲ್ಪಟ್ಟ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಗಳು ಹಗಲು ವೇಳೆ ಕಚ್ಚುವುದರಿಂದ ಡೆಂಘೀ ಸೋಂಕು ಹರಡಲಿದೆ.
ಹೀಗಾಗಿ ಜನ ತಮ್ಮ ಮನೆಯ ಸುತ್ತಮತ್ತು ನೀರು ಹಾಗೂ ತ್ಯಾಜ್ಯ ಸಂಗ್ರಹವಾಗದಂತೆ ಎಚ್ಚರವಹಿಸಬೇಕಿದೆ. ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವುದು, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ- ಕೈ ನೋವು, ಅತಿಸಾರದ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಿದೆ.
ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳು, ಗರ್ಭಿಣಿಯರು, ವೃದ್ದರು, ರೋಗಿಗಳು ಡೆಂಘೀ ಸೋಂಕಿನ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಡೆಂಘೀ ಅಬ್ಬರ: ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ ಹಾಗೂ ಥಂಡಿ ವಾತಾವರಣದಿಂದಾಗಿ ನಗರದಲ್ಲಿ ಕಳೆದ ಒಂದು ತಿಂಗಳಿನಲ್ಲಿ 720ಕ್ಕೂ ಹೆಚ್ಚು ಮಂದಿಗೆ ಡೆಂಘೀ ಸೋಂಕಿಗೆ ತುತ್ತಾಗಿದ್ದಾರೆ. ಡಿಸೆಂಬರ್ 8 ರಿಂದ 14 ರವರೆಗೂ ನಿತ್ಯ ಸಾವಿರಾರು ಮಂದಿ ಡೆಂಘೀ ಸೋಂಕಿಗೆ ತುತ್ತಾಗುತ್ತಿದ್ದಾರೆ.ಈಗಾಗಲೇ 1415 ಮಂದಿಗೆ ಡೆಂಘೀ ಪರೀಕ್ಷೆ ನಡೆಸಲಾಗಿದ್ದು, ಇವರ ಪೈಕಿ 347 ಮಂದಿಗೆ ಡೆಂಘೀ ತಗುಲಿರುವುದು ದೃಢಪಟ್ಟಿದೆ.
ರಾಜ್ಯಕ್ಕೂ ಕಾಲಿಟ್ಟ ಝೀಕಾ ವೈರಸ್ : 1947ರಲ್ಲಿ ಉಗಾಂಡಾದ ಕೋತಿಗಳಲ್ಲಿ ಕಾಣಿಸಿಕೊಂಡ ಝೀಕಾ ವೈರಸ್ 1952ರಲ್ಲಿ ತಾಂಜೇನಿಯಾದಲ್ಲಿ ಮಾನವನ ದೇಹದಲ್ಲೂ ಕಾಣಿಸಿಕೊಳ್ಳತೊಡಗಿತು. ಕಾಲನಂತರ ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಹಬ್ಬಿದ ಈ ಸೋಂಕು 1954ರಲ್ಲಿ ನಮ್ಮ ದೇಶದ ಗುಜರಾತ್‍ನಲ್ಲಿ ಕಾಣಿಸಿಕೊಂಡಿತ್ತು.
ಡ್ಯಾನ್ಸ್ ವಿಡಿಯೋ ವೈರಲ್: ನಾಲ್ಕು ಮಹಿಳಾ ಕಾನ್‍ಸ್ಟೆಬಲ್‍ಗಳ ಅಮಾನತು
ನಂತರ ರಾಜಸ್ತಾನ್, ತಮಿಳುನಾಡು, ಮಧ್ಯಪ್ರದೇಶ ಮತ್ತು ಕೇರಳಕ್ಕೂ ಕಾಲಿಟ್ಟ ಝೀಕಾ ವೈರಸ್ ಇದೀಗ ಕರ್ನಾಟಕಕ್ಕೂ ದಾಂಗುಡಿಯಿಟ್ಟಿದೆ. ಕೆಲ ದಿನಗಳ ಹಿಂದೆ ರಾಯಚೂರಿನ ಐದು ವರ್ಷದ ಬಾಲಕಿಗೆ ವೈರಲ್ ಫೀವರ್ ಕಾಣಿಸಿಕೊಂಡಿತ್ತು.
ಆ ಸಂದರ್ಭದಲ್ಲಿ ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ ಡೆಂಘೀ ಹಾಗೂ ಚಿಕೂನ್‍ಗುನ್ಯಾದ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ನಂತರ ಆಕೆಯ ಗಂಟಲು ದ್ರವದ ಮಾದರಿಯನ್ನು ಪೂನಾದಲ್ಲಿ ವೈರಾಣು ವಿಭಾಗಕ್ಕೆ ರವಾನಿಸಿ ಪರಿಶೀಲಿಸಿದಾಗ ಆಕೆಗೆ ಝೀಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಸಾಮ್ಯತೆ: ಝೀಕಾ ವೈರಸ್‍ಗೂ ಡೆಂಘೀ ಸೋಂಕಿಗೂ ಸಾಮ್ಯತೆ ಕಂಡು ಬಂದಿದೆ. ಡೆಂಘೀಗೆ ಕಾರಣವಾಗುವ ಈಡೀಸ್ ಈಜಿಪ್ಪಿ ಸೊಳ್ಳೆ ಕಡಿತವೆ ಝೀಕಾ ಸೋಂಕು ಹರಡಲು ಕಾರಣವಾಗಿದೆ. ಮಾತ್ರವಲ್ಲ ಎರಡು ರೋಗದ ಲಕ್ಷಣಗಳು ಒಂದೇ ರೀತಿ ಇರುವುದರಿಂದ ಡೆಂಘೀ ಸೋಂಕಿಗೆ ಗುರಿಯಾದವರಿಗೆ ಝೀಕಾ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಎಚ್ಚರ ವಹಿಸುವುದು ಸೂಕ್ತವಾಗಿದೆ.
Bengaluru, dengue symptoms, Zika virus,