ಬೆಂಗಳೂರು,ಫೆ.5- ಮಗುವನ್ನು ಸಾಯಿಸಿ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜೈಲಿನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆಪೊಲೀಸರು ಬಂಧಿಸಿದ್ದಾರೆ. ಅಂದ್ರಹಳ್ಳಿಯಲ್ಲಿ ಬಂಗಲೆಯಂತಿರುವ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಭರತ್ ಎಂಬಾತನನ್ನು ಅಕ್ಕ-ಪಕ್ಕದವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಮನೆಯಲ್ಲಿ ನಡೆದ ಘೋರ ದುರಂತ ದಿಂದಾಗಿ ಮನೆ ಮಾಲೀಕ ಹಲ್ಲೆಗೆರೆ ಶಂಕರ್ ಜೈಲು ಸೇರಿದ್ದು, ನಾಲ್ಕು ತಿಂಗಳಿನಿಂದ ಈ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ರಾತ್ರಿಯಾದರೆ ಈ ಮನೆ ಮುಂದೆ ಹಾದು ಹೋಗಲು ಅಕ್ಕಪಕ್ಕದವರು ಭಯಪಡುತ್ತಾರೆ. ಅಂತಹುದರಲ್ಲಿ ಏಕಾಏಕಿ ಕಳೆದ ಗುರುವಾರ ಈ ಮನೆಯಲ್ಲಿ ಬೆಳಕು ಕಾಣಿಸಿರುವುದು ಗಮನಿಸಿ ಶಂಕರ್ ಅವರ ಸಂಬಂಧಿಕರಿಗೆ ನೆರೆ ಮನೆ ನಿವಾಸಿ ತಿಳಿಸಿದ್ದಾರೆ.
ಸಂಬಂಧಿಕರು ಯಾರೂ ಬಂದಿರಲು ಸಾಧ್ಯವಿಲ್ಲ. ಮನೆ ಬಳಿ ಹೋಗಿ ನೋಡಿ ಎಂದು ತಿಳಿಸಿದಾಗ, ನೆರರೆ ಹೊರೆಯವರು ಮನೆ ಬಳಿ ಹೋಗಿ ನೋಡಿದಾಗ ಕಳ್ಳ ದೇವರ ಮನೆ ಸೇರಿಕೊಂಡಿದ್ದಾನೆ. ಎಲ್ಲಾ ಕಡೆ ಹುಡುಕಿ ನಂತರ ದೇವರ ಮನೆ ಬಳಿ ಬರುತ್ತಿದ್ದಂತೆ ದೆವ್ವಾ ದೆವ್ವಾ ಎಂದು ಚೀರುತ್ತಾ ಹೊರ ಬಂದ ವ್ಯಕ್ತಿಯ ಬಗ್ಗೆ ಅನುಮಾನಗೊಂಡು ಆತನನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ಮಾಡಲು ಬಂದಿರುವುದು ಗೊತ್ತಾಗಿದೆ.
ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಆರೋಪಿ ಭರತ್ ಈ ಮನೆಯ ಟೆರೆಸ್ ಮೂಲಕ ಬಾಗಿಲು ಮೀಟಿ ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
