ಬೆಂಗಳೂರಲ್ಲಿ ಡಬಲ್ ಮರ್ಡರ್ ಕೇಸ್ ಪ್ರಕರಣ, ಕಾರು ಚಾಲಕ ಸೇರಿ ಮೂವರು ಅರೆಸ್ಟ್

Social Share

ಬೆಂಗಳೂರು, ಡಿ. 20- ಉದ್ಯಮಿ ರಾಜಗೋಪಾಲ ರೆಡ್ಡಿ ಅವರ ಮನೆಯ ಕೆಲಸಗಾರ ಹಾಗೂ ಸೆಕ್ಯುರಿಟಿ ಗಾರ್ಡ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಕಾರು ಚಾಲಕ ಸೇರಿದಂತೆ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ ಹಣ, ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಗ್ಗನಹಳ್ಳಿಯ ನಿವಾಸಿ, ಕುಣಿಗಲ್ ತಾಲೂಕಿನ ಕಾರು ಚಾಲಕ ಜಗದೀಶ್ ಹಾಗೂ ಮೂಲತಃ ನಾಗಮಂಗಲ ತಾಲೂಕಿನವರಾದ ಹೆಗ್ಗನಹಳ್ಳಿಯ ನಿವಾಸಿ, ಸಹೋದರರಾದ ಅಭಿಷೇಕ್ ಮತ್ತು ಕಿರಣ್ ಬಂಧಿತ ಆರೋಪಿಗಳು.
ಪ್ರಮುಖ ಆರೋಪಿ ಜಗದೀಶ್ ಈ ಹಿಂದೆ ಉದ್ಯಮಿ ರಾಜಗೋಪಾಲ ರೆಡ್ಡಿ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಅವರ ಮನೆಯಲ್ಲೇ ವಾಸವಾಗಿದ್ದನು.

ಈ ಮಧ್ಯೆ ರಾಜಗೋಪಾಲ ರೆಡ್ಡಿ ಕಾರನ್ನು ಅವರಿಗೆ ಗೊತ್ತಿಲ್ಲದಂತೆ ತೆಗೆದುಕೊಂಡು ಹೋಗಿ ಅಪಘಾತ ಮಾಡಿ ಕಾರು ಜಖಂಗೊಳಿಸಿದ್ದರಿಂದ ಕೆಲಸದಿಂದ ಜಗದೀಶ್‍ನನ್ನು ತೆಗೆದುಹಾಕಿದ್ದರು. ಜಗದೀಶ್ ಕೆಲಸ ಬಿಟ್ಟಿದ್ದರೂ, ಇವರ ಮನೆ ಕೆಲಸಗಾರ ಕರಿಯಪ್ಪನ ಸಂಪರ್ಕದಲ್ಲಿದ್ದು, ರಾಜಗೋಪಾಲ ರೆಡ್ಡಿ ಅವರ ಮನೆಯ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದನು.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪವಿಲ್ಲದಂತೆ ನೋಡಿಕೊಳ್ಳಿ : ತುಷಾರ್ ಗಿರಿನಾಥ್

ರಾಜಗೋಪಾಲ ರೆಡ್ಡಿ ಅವರ ವ್ಯವಹಾರ ಹಾಗೂ ಮನೆಯ ಎಲ್ಲೆಲ್ಲಿ ಹಣ ವಡವೆಗಳು ಇರುತ್ತವೆ ಎಂದು ಜಗದೀಶ್ ತಿಳಿದುಕೊಂಡಿದ್ದನು. ಶನಿವಾರ ರಾಜಗೋಪಾಲ ರೆಡ್ಡಿ ಅವರ ಕುಟುಂಬ ಆಂಧ್ರಪ್ರದೇಶಕ್ಕೆ ತೆರಳಿರುವುದನ್ನು ತಿಳಿದುಕೊಂಡ ಜಗದೀಶ್ ಅವರ ಮನೆಗೆ ಕನ್ನ ಹಾಕಲು ಸಂಚು ರೂಪಿಸಿ, ತನಗೆ ಪರಿಚಯವಿದ್ದ ಸಹೋದರರನ್ನು ಕರೆದುಕೊಂಡು ಅಂದು ತಡರಾತ್ರಿ ಕೋರಮಂಗಲಕ್ಕೆ ಬಿಎಂಟಿಸಿ ಬಸ್‍ನಲ್ಲಿ ಬಂದು ನಂತರ ನಡೆದುಕೊಂಡು ಉದ್ಯಮಿ ಮನೆ ಬಳಿ ಹೋಗಿ ಮೊದಲು ಸೆಕ್ಯುರಿಟಿ ಗಾರ್ಡ್‍ನ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಸಂಪ್‍ಗೆ ಎಸೆದಿದ್ದಾರೆ.

ನಂತರ ಮನೆಯ ಕಾಲಿಂಗ್ ಬೆಲ್ ಒತ್ತಿದ್ದು, ಬಾಗಿಲು ತೆಗೆಯುತ್ತಿದ್ದಂತೆ ಕೆಲಸಗಾರ ಕರಿಯಪ್ಪನ ಕೈಕಾಲು ಕಟ್ಟಿ ಹಾಕಿ ಬಾಯಿಗೆ ಪ್ಲಾಸ್ಟರ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯನ್ನೆಲ್ಲಾ ಜಾಲಾಡಿ ಕೈಗೆ ಸಿಕ್ಕಿದ 5 ಲಕ್ಷ ಹಣ ಹಾಗೂ 100 ಗ್ರಾಂ ಚಿನ್ನಾಭರಣದೊಂದಿಗೆ ಆಟೋದಲ್ಲಿ ಪರಾರಿಯಾಗಿದ್ದರು.

ಭಾನುವಾರ ಬೆಳಗ್ಗೆ ಅಡುಗೆ ಕೆಲಸಗಾರ ಮನೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿತ್ತು. ತಕ್ಷಣ ಕೋರಮಂಗಲ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮನೆ ಪರಿಶೀಲಿಸಿದಾಗ ಕೆಲಸಗಾರ ಕರಿಯಪ್ಪ ಕೊಲೆಯಾಗಿರುವುದು ಕಂಡು ಬಂದಿದೆ. ಸೆಕ್ಯುರಿಟಿ ಗಾರ್ಡ್‍ನೇ ಈ ಕೊಲೆ ಮಾಡಿರಬಹುದೆಂಬ ಅನುಮಾನ ಮೊದಲಿಗೆ ವ್ಯಕ್ತವಾಗಿತ್ತು.

ಸಂಜೆ ಉದ್ಯಮಿಯ ಮನೆಯನ್ನೆಲ್ಲಾ ಇಂಚಿಂಚೂ ಪರಿಶೀಲಿಸಿದಾಗ ಸೆಕ್ಯುರಿಟಿ ಗಾರ್ಡ್ ಶವ ಸಂಪ್‍ನಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾಗಿರುವುದು ಕಂಡು ಬಂದಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದಾಗ ಉದ್ಯಮಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದ ಡಿವಿಆರ್‍ನ್ನು ಆರೋಪಿಗಳು ಕದ್ದೊಯ್ದಿರುವುದು ಕಂಡು ಬಂದಿತ್ತು.

50ಕ್ಕೂ ಹೆಚ್ಚು ಸಿಸಿ ಟಿವಿ ಪರಿಶೀಲನೆ:
ದುಷ್ಕರ್ಮಿಗಳ ಪತ್ತೆಗಾಗಿ ಸುತ್ತ-ಮುತ್ತಲ ರಸ್ತೆಗಳು ಹಾಗೂ ಕಟ್ಟಡಗಳಲ್ಲಿ ಅಳವಡಿಸಿರುವ ಸುಮಾರು 50ಕ್ಕೂ ಹೆಚ್ಚು ಸಿಸಿ ಟಿವಿಗಳು ಹಾಗೂ ಸಿಡಿಆರ್ ಪರಿಶೀಲಿಸಿ ಅಂದು ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆ ಅವಯಲ್ಲಿ ಉದ್ಯಮಿ ಮನೆ ಬಳಿ ಯಾರ್ಯಾರು ಓಡಾಡಿದ್ದಾರೆ, ಆ ಸ್ಟ್ರೀಟ್‍ನಲ್ಲಿ ಯಾರಾದರೂ ಸೆಕ್ಯುರಿಟಿ ಗಾರ್ಡ್ ಕೆಲಸ ಬಿಟ್ಟಿದ್ದಾರೆಯೇ ಇಲ್ಲವೇ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದರು.

ಅಕ್ಕ-ಪಕ್ಕದ ನಿರ್ಮಾಣ ಹಂತದ ಕಟ್ಟಡದ ಕೆಲಸಗಾರರು ಬಿಟ್ಟು ಹೋಗಿದ್ದಾರೆಯೇ ಎಂಬುದರ ವಿವರಗಳನ್ನು ಸಹ ನೆರೆಹೊರೆಯವರಿಂದ ಪೊಲೀಸರು ಪಡೆದುಕೊಂಡು ತನಿಖೆ ಕೈಗೊಂಡಿದ್ದರು.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ

ಐದು ತಂಡ ರಚನೆ:
ದುಷ್ಕರ್ಮಿಗಳ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿ ಹಲವು ಮಾಹಿತಿಗಳನ್ನು ಕಲೆ ಹಾಕಿದಾಗ ಈ ಹಿಂದೆ ರಾಜಗೋಪಾಲ ರೆಡ್ಡಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ಕೆಲಸಗಾರರ ವಿವರಗಳನ್ನು ಪಡೆದು ತನಿಖೆ ಮುಂದುವರೆಸಿ ಈ ಹಿಂದೆ ಇವರ ಮನೆಯಲ್ಲಿ ಕಾರು ಚಾಲಕನಾಗಿದ್ದ ಜಗದೀಶ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಣ, ಆಭರಣಕ್ಕಾಗಿ ಜೋಡಿ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

ಆರೋಪಿ ಜಗದೀಶ್ ಜೊತೆ ಇನ್ನೆಬ್ಬರು ಸಹೋದರರು ಕೈಜೋಡಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಸಹ ಬಂಧಿಸಿ, ವಿಚಾರಣೆಗೊಳಪಡಿಸಿ 5 ಲಕ್ಷ ಹಣ, 100 ಗ್ರಾಂ ಚಿನ್ನಾಭರಣ, ವಿದೇಶ ಕರೆನ್ಸಿ ವಶಪಡಿಸಿಕೊಂಡಿದ್ದಾರೆ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ

ಆರೋಪಿ ಜಗದೀಶ್ ಮೇಲೆ ಈಗಾಗಲೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತರರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಶ್ಲಾಘನೆ:
ಕೋರಮಂಗಲದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಆದಷ್ಟು ಶೀಘ್ರದಲ್ಲಿ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವೈಖರಿಯನ್ನು ಪ್ರತಾಪ್ ರೆಡ್ಡಿ ಅವರು ಶ್ಲಾಘಿಸಿದ್ದಾರೆ.

murder case, Three arrested, car driver,

Articles You Might Like

Share This Article