ಬೆಂಗಳೂರು, ಅ.11- ಒತ್ತುವರಿ ತೆರವು ಕಾರ್ಯಾಚರಣೆ ಅಧ್ಯಾಯ-2 ಪ್ರಾರಂಭವಾಗಿದ್ದು , ಕೆಆರ್ ಪುರ ಕ್ಷೇತ್ರದಲ್ಲಿ ಇಂದೂ ಕೂಡ ಕಾರ್ಯಾಚರಣೆ ಭರದಿಂದ ಸಾಗಿತ್ತು. ಬಸವನಪುರ ವಾರ್ಡ್ನ ಎಸ್ಆರ್ ಲೇಔಟ್ನಲ್ಲಿ ಪಾಲಿಕೆ ಎಇಇ ಪಂಪಾಪತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ಹಿಂದೆಯೇ 15 ಮನೆಗಳಿಗೆ ನೋಟೀಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಜೆಸಿಬಿ ಮೂಲಕ ತೆರವು ಮಾಡಿದರೆ ಮನೆಯ ಕಿಟಕಿಗಳಿಗೆ ತೊಂದರೆಯಾಗುತ್ತದೆ. ಮರು ಬಳಕೆಗೆ ಬಾರದಂತಾಗುತ್ತದೆ ಎಂದು ಕೆಲವು ಮನೆಯವರೇ ಸ್ವತಃ ಕಿಟಕಿಗಳನ್ನು ತೆರವು ಮಾಡಿ ಕೊಂಡರು. ಉಳಿದ ಒತ್ತುವರಿ ಜಾಗವನ್ನು ಪಾಲಿಕೆಯವರೆ ತೆರವುಗೊಳಿಸಿದರು.
ಕಿಡಿ: ಪ್ರತಿ ತೆರವು ವೇಳೆ ಅಡ್ಡಿ , ಗಲಾಟೆ ಮಾಮೂಲಿಯಾಗಿತ್ತು. ಇಂದೂ ಕೂಡ ತೆರವಿಗೆ ಮುಂದಾದ ಅಧಿಕಾರಿಗಳ ವಿರುದ್ಧ ಮನೆ ಮಾಲೀಕರು ವಿರೋಧ ವ್ಯಕ್ತಪಡಿಸಿ ಕಳೆದ 20-30 ವರ್ಷಗಳಿಂದ ಇಲ್ಲೇ ವಾಸವಾಗಿದ್ದೇವೆ. ಆಗ ಯಾವ ಅಧಿಕಾರಿಗಳ ಗಮನಕ್ಕೂ ಗೊತ್ತಿರಲಿಲ್ಲವೇ. ಈಗ ಒತ್ತುವರಿ ಅಗಿರುವುದು ಕಂಡು ಬಂತ ಎಂದು ಕಿಡಿಕಾರಿದರು.
ಹೊಟ್ಟೆ, ಬಟ್ಟೆ ಕಟ್ಟಿ, ಕಾಸಿಗೆ ಕಾಸು ಕೂಡಿಸಿ ಮನೆ ಕಟ್ಟಿಕೊಂಡಿದ್ದೇವೆ. ಏಕಾಏಕಿ ಕ್ಷಣ ಮಾತ್ರದಲ್ಲಿ ಮನೆ ಒಡೆದರೆ ಎಲ್ಲಿಗೆ ಹೋಗುವುದು. ಇದು ಅನ್ಯಾವಲ್ಲವೇ ಎಂದು ಗುಡುಗಿದರು. ಮೊದಲು ಸರ್ವೆ ಮಾಡಿದಾಗ 2 ಮೀಟರ್ ಅಂತ ಮಾರ್ಕ್ ಮಾಡಿದ್ದೀರಿ, ಇವಾಗ 3 ಮೀಟರ್ನಷ್ಟು ಒತ್ತುವರಿ ಮಾಡಲಾಗುತ್ತಿದೆ.
ನಮಗೆ ಸ್ವಲ್ಪ ಕಲಾವಕಾಶ ಕೊಡಿ. ಸ್ವತಃ ನಾವೇ ತೆರವು ಮಾಡ್ತಿವಿ ಅಂದರೂ, ಅಧಿಕಾರಿಗಳು ಕೇಳುತ್ತಿಲ್ಲ. ಅಧಿಕಾರಿಗಳು ಏಕಾಏಕಿ ಜೆಸಿಬಿ ತಂದು ತೆರವು ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.