ಬೆಂಗಳೂರು, ಮಾ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಚೊಚ್ಚಲ ಬಜೆಟ್‍ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 8409 ಕೋಟಿ ರೂ.ಗಳ ಅನುದಾನ ಒದಗಿಸುವುದರ ಜತೆಗೆ 6 ಲಕ್ಷಕ್ಕೂ ಹೆಚ್ಚು ಬಿ ಸ್ವತ್ತುಗಳಿಗೆ ಎ ಖಾತಾ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ವಿವರಗಳನ್ನು ಬಿ ರಿಜಿಸ್ಟ್ರರ್‍ನಲ್ಲಿ ದಾಖಲಿಸಲಾಗಿದ್ದು, ಸದರಿ ಸ್ವತ್ತುಗಳನ್ನು ಎ ಖಾತೆಗೆ ದಾಖಲಿಸಲು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅನಿಯಮ ಹಾಗೂ ಕರ್ನಾಟಕ ಭೂ ಕಂದಾಯ ಅನಿಯಮಗಳಡಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಜನಜೀವನ ಸುಗಮಗೊಳಿಸಲು, ಸಂಚಾರ ದಟ್ಟಣೆ ನಿವಾರಿಸಲು ಹಾಗೂ ನಗರದ ಪರಿಸರದಲ್ಲಿ ಕೆರೆಗಳ ಅಭಿವೃದ್ಧಿ, ಹಸಿರು ಹೊದಿಕೆ ಹೆಚ್ಚಿಸುವ ಮೂಲಕ ಸೌಂದರ್ಯ ವೃದ್ಧಿಗೂ ಈ ಬಾರಿಯ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ.
ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆರು ಸಾವಿರ ಕೋಟಿ ರೂ.ಗಳ ಅಮೃತ್ ನಗರೋತ್ಥಾನ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿಯಲ್ಲಿ ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ, ಗ್ರೇಡ್ ಸಪರೇಟರ್, ಕೆರೆ ಅಭಿವೃದ್ಧಿ, ಬೃಹತ್ ನೀರುಗಾಲುವೆ ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ, ಕಟ್ಟಡಗಳು, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು ಮತ್ತು ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು.
ನಮ್ಮ ಮೆಟ್ರೋ ಹಂತ-2ರಲ್ಲಿ 7.53ಕಿ.ಮೀ.ಗಳ ಹೆಚ್ಚುವರಿ ಮಾರ್ಗದ ಕಾರ್ಯಾರಂಭ ಮಾಡಲಾಗಿದ್ದು, 2022-23ನೆ ಸಾಲಿನಲ್ಲಿ 33 ಕಿ.ಮೀ.ಗಳ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ 89ಕಿ.ಮೀ. ಉದ್ದದ ಮೆಟ್ರೋ ಉದ್ದದ ಮೆಟ್ರೋ ಮಾರ್ಗ ಆರಂಭಿಸಿದಂತಾಗುವುದು.
ಸಿಲ್ಕ್‍ಬೋರ್ಡ್‍ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58.19ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಯನ್ನು 2025ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
# ಮೆಟ್ರೋ 3ನೆ ಹಂತ ಜಾರಿಗೆ 11,250 ಕೋಟಿ:
ಬೆಂಗಳೂರು ಮೆಟ್ರೋ ಹಂತ-3 ಯೋಜನೆಗಾಗಿ 11,250 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ರವಾನಿಸಲಾಗುವುದು. ಹೆಬ್ಬಾಳದಿಂದ ಜೆಪಿ ನಗರದವರೆಗೆ 32ಕಿ.ಮೀ.ಗಳ ಹೊರವರ್ತುಲ ರಸ್ತೆ ಮಾರ್ಗ ಹಾಗೂ ಹೊಸಳ್ಳಿಯಿಂದ ಕಡಬಗೆರೆ ವರೆಗಿನ 13ಕಿ.ಮೀ. ಮಾರ್ಗವನ್ನು ಮೆಟ್ರೋ 3ನೆ ಹಂತ ಹೊಂದಿರಲಿದೆ.
2022-23ನೆ ಸಾಲಿನಲ್ಲಿ 37ಕಿ.ಮೀ. ಉದ್ದದ ಸರ್ಜಾಪುರದಿಂದ ಅಗರ, ಕೋರಮಂಗಲ ಮತ್ತು ಡೇರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ 36ಕಿ.ಮೀ. ಉದ್ದದ ಹೊಸ ಮಾರ್ಗಕ್ಕೆ ವಿಸ್ತೃತ ಯೋಜನೆ ತಯಾರಿಸಲು ಕ್ರಮ ಕೈಗೊಳ್ಳಲಾಗುವುದು.
# ಸ್ಕೈ ವಾಕ್‍ಗಳ ನಿರ್ಮಾಣ:
ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕಿಸಲು ಬನಶಂಕರಿ ಜಂಕ್ಷನ್‍ನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಲಾಗುವುದು. ವೈಟ್‍ಫೀಲ್ಡ್, ಕೆಆರ್ ಪುರ, ಬಯ್ಯಪ್ಪನಹಳ್ಳಿ, ಯಶವಂತಪುರ, ಜ್ಞಾನಭಾರತಿ ಮತ್ತು ಯಲಹಂಕ ರೈಲ್ವೆ ನಿಲ್ದಾಣಗಳಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ರೈಲ್ವೆ ಇಲಾಖೆಯೊಂದಿಗೆ ಮೆಟ್ರೋ ನಿಲ್ದಾಣದ ಸಂಪರ್ಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
# 73ಕಿ.ಮೀ. ಉದ್ದದ ಪೆರಿಪೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಚಾಲನೆ:
ನಗರದ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಹಳೆಮದ್ರಾಸ್ ರಸ್ತೆ ಮೂಲಕ ಹೊಸೂರು ರಸ್ತೆಯನ್ನು ಸಂಪರ್ಕಿಸುವ 73ಕಿ.ಮೀ. ಉದ್ದದ ನೂರು ಮೀಟರ್ ಅಗಲದ ಪೆರಿಪೆರಲ್ ರಿಂಗ್ ರಸ್ತೆ ನಿರ್ಮಾಣದ ಭೂ ಸ್ವಾೀನ ಸೇರಿ 21,091 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ಕಾಮಗಾರಿ ಆರಂಭಿಸಲು ಡಿಬಿಎಫ್‍ಒಟಿ ಮಾದರಿಯಲ್ಲಿ ಗುತ್ತಿಗೆದಾರರೇ ಭೂ ಸ್ವಾೀನ ಮತ್ತು ನಿರ್ಮಾಣ ವೆಚ್ಚ ಭರಿಸುವುದರೊಂದಿಗೆ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು.
ಗೊರಗುಂಟೆಪಾಳ್ಯದಲ್ಲಿ ಸಂಚಾರ ದಟ್ಟಣೆ ನಿವಾರಿಸಿ ಎಲ್ಲ ವಾಹನಗಳ ಸಿಗ್ನಲ್ ಮುಕ್ತ ಸಂಚಾರಕ್ಕೆ ಗ್ರೇಡ್ ಸಪರೇಟರ್, ಮೇಲ್ಸೇತುವೆ ಕಾಮಗಾರಿಗಳನ್ನು ಬಿಬಿಎಂಪಿ, ಬಿಡಿಎ ಮತ್ತು ಎನ್‍ಎಚ್‍ಎಐ ಸಂಸ್ಥೆಗಳ ವತಿಯಿಂದ ಜಂಟಿಯಾಗಿ ಕ್ರಮ ವಹಿಸಲಾಗುವುದು. ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 2671 ಎಕರೆ ಜಮೀನು ಭೂ ಸ್ವಾೀನಪಡಿಸಿಕೊಳ್ಳಲಾಗಿದ್ದು, ಬಾಕಿ 1297 ಎಕರೆ ಜಮೀನಿನ ಭೂ ಸ್ವಾೀನ ಪ್ರಕ್ರಿಯೆ ಪೂರ್ಣಗೊಳಿಸಿ ಆಧುನಿಕ ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸಲಾಗುತ್ತಿದೆ.
ಸರ್‍ಎಂವಿ, ಬನಶಂಕರಿ 6ನೆ ಹಂತ ಮತ್ತು ಅಂಜನಾಪುರ ಬಡಾವಣೆಗಳಲ್ಲಿನ ರಸ್ತೆ, ಚರಂಡಿಗಳು, ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ಕಾರ್ಯವನ್ನು 404 ಕೋಟಿ ರೂ. ವೆಚ್ಚದಲ್ಲಿ ಬಿಡಿಎ ವತಿಯಿಂದ ನಿರ್ಮಿಸಿ ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು.
ಎನ್‍ಜಿಎಫ್‍ನ 105 ಎಕರೆ ಪ್ರದೇಶದಲ್ಲಿ ಸಿಂಗಪೂರ್ ಮಾದರಿಯಲ್ಲಿ ಗ್ರೀನ್ ಎಕ್ಸ್‍ಪೋ ನಿರ್ಮಿಸಲಾಗುವುದು. ಅದರ ಮೂಲಕ ಪರಿಸರ ಸ್ನೇಹಿ ಸಾರಿಗೆ, ಹಸಿರು ಮೂಲ ಸೌಕರ್ಯ, ಹಸಿರು ನವೋದ್ಯಮ ಮುಂತಾದವುಗಳ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು.
ಬೆಂಗಳೂರು ಉಪನಗರ ರೈಲು ಯೋಜನೆಯನ್ನು 15,267ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 2026ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. 148ಕಿ.ಮೀ. ಉದ್ದದ ಈ ಯೋಜನೆಯಡಿ 4 ಕಾರಿಡಾರ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಚಿಕ್ಕಬಾಣಾವರ-ಬಯ್ಯಪ್ಪನಹಳ್ಳಿ ಕಾರಿಡಾರ್‍ನ ಸಿವಿಲ್ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ.
ನಗರಕ್ಕೆ ಹೆಚ್ಚುವರಿಯಾಗಿ 775 ದಶಲಕ್ಷ ಲೀಟರ್ ಕಾವೇರಿ ನೀರು ತರಲು 5550 ಕೋಟಿ ರೂ. ವೆಚ್ಚದಲ್ಲಿ ಕಾವೇರಿ 5ನೆ ಹಂತ ಜಾರಿಯಲ್ಲಿದ್ದು, ಇಲ್ಲಿಯವರೆಗೂ 1556 ಕೋಟಿ ರೂ. ವೆಚ್ಚವಾಗಿದೆ. 2024-25ನೆ ಸಾಲಿನ ಅಂತ್ಯದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು.
ಜಲಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ಉನ್ನತೀಕರಣದ ಕಾಮಗಾರಿಗೆ 1500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಮೆಗಾ ಸಿಟಿ ರಿವಾಲ್ವಿಂಗ್ ನಿಯಡಿ ಅರ್ಕಾವತಿ ನೀರಿನ ಮೂಲವನ್ನು ಪುನರುಜ್ಜೀವನಗೊಳಿಸಿ ಎತ್ತಿನ ಹೊಳೆ ಯೋಜನೆಯಿಂದ 1.7ಟಿಎಂಸಿ ನೀರನ್ನು ಯೋಜನಾ ಬದ್ಧವಾಗಿ ಬಳಸಿಕೊಳ್ಳುವ ಸಲುವಾಗಿ 312 ಕೋಟಿ ರೂ. ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿಯನ್ನು 2022-23ನೆ ಸಾಲಿನಲ್ಲಿ ಮುಕ್ತಾಯಗೊಳಿಸಲಾಗುವುದು.
ನಗರದ ರಾಜಕಾಲುವೆಗಳನ್ನು ಪುನರುಜ್ಜೀವನಗೊಳಿಸಿ ನಾಗರಿಕರಿಗೆ ವಿಹಾರ ತಾಣವಾಗಿ ಪರಿವರ್ತಿಸುವ ಕೆಕೆ-100 ಸಿಟಿಜನ್ ವಾಟರ್ ವೇ ಯೋಜನೆಯಡಿ 195 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ.ಮಳೆಗಾಲದಲ್ಲಿ ನಗರದಲ್ಲಿ ಪದೇ ಪದೇ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ಹೋಗಲಾಡಿಸಲು ಮತ್ತು ರಾಜಕಾಲುವೆಗಳ ಅಭಿವೃದ್ಧಿಗೆ 1500 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದೆ.
ಪೀಣ್ಯ ಕೈಗಾರಿಕಾ ಪ್ರದೇಶದ ಮಾದರಿಯಲ್ಲೇ ಸಣ್ಣ ಮತ್ತು ಅತಿಸಣ್ಣ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ನಗರದ ಜನಸಂಖ್ಯೆಗನುಗುಣವಾಗಿ ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ದಿಕ್ಕಿನಲ್ಲಿ 500 ಹಾಸಿಗೆ ಸಾಮಥ್ರ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಆಯ್ದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 89 ಕೋಟಿ ರೂ. ವೆಚ್ಚದಲ್ಲಿ ನಗರದ ಆಯ್ದ 20 ಶಾಲೆಗಳನ್ನು ಬೆಂಗಳೂರು ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗುವುದು.
