ತೀವ್ರಗೊಂಡ ಈದ್ಗಾ ಮೈದಾನ ವಿವಾದ, ನಾಳೆ ಚಾಮರಾಜ ಪೇಟೆ ಬಂದ್

Social Share

ಬೆಂಗಳೂರು,ಜು.11- ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತಾಗಬೇಕು ಎಂದು ಆಗ್ರಹಿಸಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ ನಾಳೆ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ನಾಳಿನ ಚಾಮರಾಜಪೇಟೆ ಬಂದ್ ಹಿನ್ನೆಲೆಯಲ್ಲಿ ಒಬ್ಬ ಡಿಸಿಪಿ, ಮೂವರು ಎಸಿಪಿಗಳು, 15ಕ್ಕೂ ಹೆಚ್ಚು ಇನ್ಸ್‍ಪೆಕ್ಟರ್‍ಗಳು, 6 ಕೆಎಸ್‍ಆರ್‍ಪಿ, ಮೂರು ಸಿಎಆರ್ ತುಕಡಿಗಳು ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ನಾಳಿನ ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಯಾರಾದರೂ ಕಾನೂನು ಮೀರುವಂತೆ ವರ್ತಿಸಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

# ಬಂದ್‍ಗೆ ಭರಪೂರ ಬೆಂಬಲ:

ಚಾಮರಾಜಪೇಟೆ ನಾಗರೀಕ ಒಕ್ಕೂಟ ಕರೆ ನೀಡಿರುವ ಬಂದ್‍ಗೆ ಸ್ಥಳೀಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಚಾಮರಾಜಪೇಟೆ ಸುತ್ತಮುತ್ತ ಇರುವ ಬಹುತೇಕ ಅಂಗಡಿ-ಮುಗ್ಗಟ್ಟುಗಳ ಮುಂಭಾಗ ಬಂದ್ ನಮ್ಮ ಸಂಪೂರ್ಣ ಬೆಂಬಲವಿದೆ ಎಂಬ ಫಲಕಗಳನ್ನು ಅಳವಡಿಸಿರುವುದು ಕಂಡು ಬರುತ್ತಿದೆ.

ಒಕ್ಕೂಟದ ಅಧ್ಯಕ್ಷ ರುಕ್ಮಾಂಗದ ಮತ್ತಿತರರು ಇಂದು ಮುಂಜಾನೆಯಿಂದಲೇ ಉದ್ಯಾನವನಗಳು ಹಾಗೂ ರಸ್ತೆಗಳಲ್ಲಿ ವಾಕಿಂಗ್ ಮಾಡುತ್ತಿರುವ ನಾಗರೀಕರಿಗೆ ಬಂದ್‍ಗೆ ಬೆಂಬಲಿಸುವ ಕರಪತ್ರ ನೀಡಿ ನಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

#ಬಿಬಿಎಂಪಿ ಎಡವಟ್ಟು:

ಚಾಮರಾಜಪೇಟೆ ಈದ್ಗಾ ಮೈದಾನ ಪಾಲಿಕೆಯ ಸ್ವತ್ತು ಎಂದು ಹೇಳಿಕೆ ನೀಡುವ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ಅವರ ಎಡವಟ್ಟಿನ ಹೇಳಿಕೆಯಿಂದಾಗಿ ಇಂದು ಚಾಮರಾಜಪೇಟೆ ಉದ್ವಿಗ್ನತೆಗೆ ಕಾರಣವಾಗಿದೆ.

ಮೊದಲು ಬಿಬಿಎಂಪಿ ಸ್ವತ್ತು ಎಂದು ಹೇಳಿಕೆ ನೀಡಿದ್ದ ಆಯುಕ್ತರು ಕೆಲ ದಿನಗಳ ನಂತರ ಶಾಸಕ ಜಮೀರ್ ಆಹ್ಮದ್‍ಖಾನ್ ಅವರನ್ನು ಭೇಟಿಯಾಗಿದ್ದ ನಂತರ ಅವರು ಮೈದಾನ ನಮ್ಮ ಸ್ವತ್ತಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರು.

ಈ ಘಟನೆ ನಂತರ ಈದ್ಗಾ ಮೈದಾನ ನಮ್ಮ ಸ್ವತ್ತು ಎಂದು ವಕ್ ಬೋರ್ಡ್ ಸಮರ್ಥಿಸಿಕೊಂಡಿತ್ತು. ಆದರೆ, ಅದಕ್ಕೆ ಸಮರ್ಪಕವಾದ ದಾಖಲೆ ಸಲ್ಲಿಸಲು ವಿಫಲವಾಗಿತ್ತು. ಆದರೆ, ಸ್ಥಳೀಯರು ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತು ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಅದನ್ನು ವಕ್ ಆಸ್ತಿ ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ನಾಗರೀಕರ ಒಕ್ಕೂಟ ಜು.12ರಂದು ಚಾಮರಾಜಪೇಟೆ ಬಂದ್‍ಗೆ ಕರೆ ನೀಡಿತ್ತು.

# ಜಮೀರ್ ಎಂಟ್ರಿ:

ಯಾವಾಗ ಈದ್ಗಾ ಮೈದಾನ ಯಾರ ಆಸ್ತಿ ಎಂಬ ಬಗ್ಗೆ ವಿವಾದ ಉಂಟಾಗುತ್ತಿದ್ದಂತೆ ಅಖಾಡಕ್ಕೆ ಇಳಿದ ಚಾಮರಾಜಪೇಟೆ ಶಾಸಕ ಜಮೀರ್ ಆಹ್ಮದ್ ಖಾನ್ ಅವರು ಎಲ್ಲ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಶಾಂತಿ ಸೌಹಾರ್ಧ ಸಭೆ ಕರೆದಿದ್ದರು.

ಜಮೀರ್ ಅವರ ಸಭೆಗೆ ಬಿಜೆಪಿ ಮುಖಂಡರು ಹೊರತುಪಡಿಸಿ ಹಲವಾರು ಮಂದಿ ಪಾಲ್ಗೊಂಡು ಈದ್ಗಾ ಮೈದಾನವನ್ನು ಮಕ್ಕಳ ಆಟದ ಮೈದಾನವನ್ನಾಗಿ ಮುಂದುವರೆಸಿಕೊಂಡು ಹೋಗುವಂತೆ ಮನವಿ ಮಾಡಿಕೊಂಡಿದ್ದರು.
ಆ ಸಂದರ್ಭದಲ್ಲಿ ಜಮೀರ್ ಅವರು ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತಾಗಬೇಕು ಎಂದು ಆಗ್ರಹಿಸಿ ಬಂದ್‍ಗೆ ಕರೆ ನೀಡಿರುವವರು ಸ್ಥಳೀಯರೇ ಅಲ್ಲ. ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಕೆಲವರು ವಿವಾದಕ್ಕೆ ತುಪ್ಪ ಸುರಿಯುತ್ತಿದ್ದಾರೆ ಎಂದು ಆರೋಪಿಸಿದ್ದರು.ಮಾತ್ರವಲ್ಲ, ಈದ್ಗಾ ಮೈದಾನವನ್ನು ಮಕ್ಕಳ ಆಟದ ಮೈದಾನವನ್ನಾಗಿಯೇ ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು.

#ತಿರುಗಿಬಿದ್ದ ಒಕ್ಕೂಟ:

ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತಾಗಬೇಕು ಎಂದು ಆಗ್ರಹಿಸಿ ಬಂದ್‍ಗೆ ಕರೆ ನೀಡಿದ್ದ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಸದಸ್ಯರು ಜಮೀರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ಕರೆ ನೀಡಿರುವವರು ಸ್ಥಳೀಯರೇ ಅದಕ್ಕೆ ಅಗತ್ಯ ಪುರಾವೆ ಒದಗಿಸಲು ನಾವು ಸಿದ್ಧ. ಶಾಸಕರೇ ಸ್ಥಳೀಯ ನಿವಾಸಿಯಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿತ್ತು.

#ರಣಕಹಳೆ:

ಜಮೀರ್ ಅವರ ವ್ಯತಿರಿಕ್ತ ಹೇಳಿಕೆಯಿಂದ ಕ್ಷುದ್ರಗೊಂಡಿರುವ ಒಕ್ಕೂಟದ ಸದಸ್ಯರು ನಾಳಿನ ಬಂದ್‍ನಲ್ಲಿ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ. ಇಂದಿನಿಂದಲೇ ಸ್ಥಳೀಯ ವ್ಯಾಪಾರಿಗಳು, ನಿವಾಸಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರುಗಳನ್ನು ಸಂಪರ್ಕಿಸಿ ಬಂದ್ ಯಶಸ್ವಿಯಾಗಲು ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಆದರೆ, ಬಂದ್ ನಡೆಯಲು ಬಿಡಬಾರದು ಎಂದು ಜಮೀರ್ ಪಡೆ ಹಠ ಹಿಡಿದಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿರುವುದರಿಂದ ಚಾಮರಾಜಪೇಟೆ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

Articles You Might Like

Share This Article