ಬೆಂಗಳೂರು, ಏ.11- ದೊಣ್ಣೆಯಿಂದ ಕೂಲಿ ಕಾರ್ಮಿಕರೊಬ್ಬರ ತಲೆ ಹಾಗೂ ಗಲ್ಲಕ್ಕೆ ಹೊಡೆದು ಕೊಲೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಆನಂದ್ (38) ಕೊಲೆಯಾದ ಕೂಲಿ ಕಾರ್ಮಿಕ.
ಆನಂದ್ ಕಲಾಸಿಪಾಳ್ಯ ಹಾಗೂ ಸಿಟಿ ಮಾರ್ಕೆಟ್‍ನಲ್ಲಿ ಕೂಲಿ ಕೆಲಸ ಮಾಡಿಕೊಂಡು ರಾತ್ರಿ ಅಲ್ಲೇ ಮಲಗಿಕೊಳ್ಳುತ್ತಿದ್ದರು.
ರಾತ್ರಿ 11 ಗಂಟೆ ಸುಮಾರಿನಲ್ಲಿ ಸಿಟಿ ಮಾರ್ಕೆಟ್ ಮೆಟ್ರೋ ನಿಲ್ದಾಣದ ಸಮೀಪ ಆನಂದ್ ಜತೆ ಮತ್ತೊಬ್ಬ ವ್ಯಕ್ತಿ ಜಗಳವಾಡಿ ದೊಣ್ಣೆಯಿಂದ ತಲೆ, ಮುಖ ಹಾಗೂ ಗಲ್ಲಕ್ಕೆ ಹೊಡೆದಿದ್ದರಿಂದ ಹಲ್ಲುಗಳು ಉದುರಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವಿವಿ ಪುರಂ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೆಟ್ರೋ ಸ್ಟೇಷನ್ ಬಳಿ ನಿನ್ನೆ ರಾತ್ರಿ ಆನಂದ್ ವ್ಯಕ್ತಿಯೊಬ್ಬ ಓಡಾಡುತ್ತಿದ್ದುದನ್ನು ಸ್ಥಳೀಯರು ನೋಡಿದ್ದು, ಆ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಈಗ ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Bengaluru, #laborer, #murder,