ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ

Spread the love

ಬೆಂಗಳೂರು, ಮೇ 12- ಕಳೆದ ಮೂರು ದಿನಗಳಿಂದ ಎಡಬಿಡದೆ ಬೀಳುತ್ತಿರುವ ಜಿಟಿಜಿಟಿ ಮಳೆ ಸದ್ಯಕ್ಕೆ ಬಿಡುಗಡೆ ನೀಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಅಸಾನಿ ಚಂಡಮಾರುತದ ಪರೋಕ್ಷ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುವುದಲ್ಲದೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯು ಕಳೆದ ಮೂರು ದಿನಗಳಿಂದ ಬೀಳುತ್ತಿದೆ. ಇದೇ ರೀತಿಯ ವಾತಾವರಣ ನಾಳೆವರೆಗೂ ಮುಂದುವರೆಯುವ ಲಕ್ಷಣಗಳಿವೆ.

ಅಸಾನಿ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿದ್ದು, ಹೆಚ್ಚು ಕಡಿಮೆ ಇನ್ನೊಂದು ವಾರ ಮಳೆ ಮುಂದುವರಿಯುವ ಸೂಚನೆಗಳು ಕಂಡುಬರುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಆಗಾಗ್ಗೆ ಬೀಳುತ್ತಿರುವ ತುಂತುರು ಮಳೆಯ ವಾತಾವರಣ ನಾಳೆವರೆಗೂ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ, ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ರಾಜ್ಯದ ದಕ್ಷಿಣ ಒಳನಾಡು ಹಾಗೂ ಒಳನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮೋಡ ಮುಸುಕಿದ ವಾತಾವರಣ ಕಂಡುಬರಲಿದೆ. ಕೆಲವೆಡೆ ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ತಂಪಾದ ಮೇಲ್ಮೈ ಗಾಳಿ ಬೀಸುವುದರಿಂದ ತಾಪಮಾನದ ಪ್ರಮಾಣವೂ ಇಳಿಕೆಯಾಗಿದೆ. ಮೇನಲ್ಲಿ ಗರಿಷ್ಠ ತಾಪಮಾನ ಹೆಚ್ಚಿದ್ದು, ಸೆಕೆ ಕಂಡುಬರುತ್ತಿತ್ತು.

ಆದರೆ, ಕಳೆದ ಎರಡು ವಾರದಿಂದ ಮಳೆ ಮುಂದುವರಿಯುವುದರಿಂದ ದಾಖಲೆ ಪ್ರಮಾಣದಲ್ಲಿ ಗರಿಷ್ಠ ತಾಪಮಾನ ಇಳಿಕೆಯಾಗಿದ್ದು, ರಾಜ್ಯದ ಒಳನಾಡಿನಲ್ಲಿ ತಂಪಾದ ವಾತಾವರಣ ಕಂಡುಬರುತ್ತಿದೆ. ಮೇನಲ್ಲಿ ಪೂರ್ವ ಮುಂಗಾರು ಮಳೆ ಸಹಜವಾಗಿದ್ದು, ಕೆಲವೆಡೆ ಗುಡುಗು-ಮಿಂಚಿನಿಂದ ಕೂಡಿದ ಸುರಿಮಳೆಯಾಗುವ ಸಾಧ್ಯತೆಗಳಿವೆ.

ಮುಂಗಾರು ಪೂರ್ವ ಮಳೆಗೆ ಬಹಳಷ್ಟು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು, ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿದ್ದರೆ, ಕೆಲವು ರೈತರು ಬಿತ್ತನೆಯನ್ನೂ ಮಾಡಿದ್ದಾರೆ. ಬೇಸಿಗೆಯಲ್ಲಿ ಬಿದ್ದ ಬಿರುಗಾಳಿ ಸಹಿತ ಮಳೆ, ಆಲಿಕಲ್ಲಿಗೆ ಭತ್ತ, ದ್ರಾಕ್ಷಿ, ಮಾವು ಸೇರಿದಂತೆ ಹಲವು ಬೆಳೆಗಳು ಬಹಳಷ್ಟು ಕಡೆ ಹಾನಿಗೀಡಾದ ವರದಿಯಾಗಿವೆ ಎಂದು ಅವರು ಹೇಳಿದರು.

Facebook Comments