ಬೆಂಗಳೂರು, ಮಾ.2- ಮೆಜೆಸ್ಟಿಕ್‍ನ ಗಲ್ಲಿಯಲ್ಲಿ ಒಟ್ಟಿಗೆ ಮಲಗಿದ್ದ ನಾಲ್ವರ ಪೈಕಿ ಒಬ್ಬನನ್ನು ಕೊಂದು ಮೂವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ಮುಂಜಾನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೆಜೆಸ್ಟಿಕ್ ನಿವಾಸಿ ಸಂದೀಪ್ ಅಲಿಯಾಸ್ ಮಚ್ಚಾ(35) ಕೊಲೆಯಾದ ಯುವಕ. ಘಟನೆಯಲ್ಲಿ ದಾವಣಗೆರೆ ಮೂಲದ ಶಂಕರ್, ಮಾಗಡಿಯ ಕಾವೇರಿ ಕಾಲೋನಿ ನಿವಾಸಿ ರವಿ ಹಾಗೂ ಕೆಂಚ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ದಾವಣಗೆರೆ ಮೂಲದ ಶಂಕರ್ ರಜಿನಿ ಬಾರ್‍ನಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದರೆ, ಸಂದೀಪ್, ರವಿ ಹಾಗೂ ಕೆಂಚ ಚಿಂದಿ ಆಯುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ರಾತ್ರಿ ಕೆಲಸ ಮುಗಿಸಿಕೊಂಡು ಈ ನಾಲ್ಕು ಮಂದಿ ಒಟ್ಟಾಗಿ ಸೇರಿ ಮೆಜೆಸ್ಟಿಕ್‍ನ ಕಪಾಲಿ ಗಲ್ಲಿಯಲ್ಲಿರುವ ಜನತಾ ಲಾಡ್ಜ್ ಮತ್ತು ರಜನಿ ಬಾರ್ ಮಧ್ಯೆ ಇರುವ ಗಲ್ಲಿಯಲ್ಲಿನ ಬಿರಿಯಾನಿ ಪಾಯಿಂಟ್ ಅಂಗಡಿ ಪಕ್ಕ ಮಲಗುತ್ತಿದ್ದರು.
ಸವಾಲುಗಳನ್ನು ಮೆಟ್ಟಿ ನಿಂತರೆ ಸಮಗ್ರ ಅಭಿವೃದ್ಧಿ: ಪ್ರಧಾನಿ ಮೋದಿ
ನಿನ್ನೆ ಮಂಜಾನೆ ಒಂದು ಗಂಟೆ ಸುಮಾರಿಗೆ ಈ ನಾಲ್ವರು ಮಲಗಿದ್ದಾಗ ಮೆಜೆಸ್ಟಿಕ್‍ನ ಹೊಟೇಲ್‍ವೊಂದರಲ್ಲಿ ಕೆಲಸ ಮಾಡುವ ಓರಿಸ್ಸಾ ಮೂಲದ ಯುವಕ ಮೊಹಮ್ಮದ್ ಥೈಸಿನ್(23) ಎಂಬಾತ ಗಲ್ಲಿಗೆ ಬಂದು ಮೂತ್ರವಿಸರ್ಜನೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಎಚ್ಚರಗೊಂಡ ಈ ನಾಲ್ವರು ನಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದೀಯಾ ಎಂದು ಆತನನೊಂದಿಗೆ ಜಗಳವಾಡಿ ಹೊಡೆದಿದ್ದಾರೆ.
ಸ್ಥಳದಿಂದ ತೆರಳಿದ ಮೊಹಮ್ಮದ್ ಥೈಸಿನ್ ಕೆಲ ಸಮಯದ ನಂತರ ಮುಂಜಾನೆ 3.40ರ ಸುಮಾರಿಗೆ ಮತ್ತೆ ಈ ಗಲ್ಲಿಗೆ ಬಂದು ಮಲಗಿದ್ದ ನಾಲ್ವರ ಮೇಲೂ ದೊಣ್ಣೆ ಹಾಗೂ ಕಲ್ಲಿನಿಂದ ಮನಬಂದಂತೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಹಲ್ಲೆಯಿಂದಾಗಿ ಸಂದೀಪ್ ಮತ್ತು ಕೆಂಚ ರಕ್ತದ ಮಡುವಿನಲ್ಲಿ ಪ್ರಜ್ಞೆ ತಪ್ಪಿದ್ದು, ಶಂಕರ್ ಮತ್ತು ರವಿ ತಲೆ ಹಾಗೂ ಮುಖದ ಭಾಗಗಳಿಗೆ ರಕ್ತ ಗಾಯಗಳಾಗಿವೆ.
ಗಂಗೊಂಡನಹಳ್ಳಿಯ ನಿವಾಸಿ ಶಫಿಕ್ ಅಹಮ್ಮದ್ ಬಿರಿಯಾನಿ ಪಾಯಿಂಟ್ ಅಂಗಡಿಯ ಮಾಲೀಕ. ಈ ನಾಲ್ವರು ಯುವಕರು ಕಳೆದ ಒಂದು ತಿಂಗಳಿನಿಂದ ಶಫಿಕ್ ಅವರಿಗೆ ಪರಿಚಿತರು. ಫೆ. 28ರಂದು ಅನಾರೋಗ್ಯದ ನಿಮಿತ್ತ ಶಫಿಕ್ ಅವರು ಅಂಗಡಿ ತೆರೆದಿರಲಿಲ್ಲ.
ನಿನ್ನೆ ಬೆಳಗ್ಗೆ ಶಫಿಕ್ ಅವರು ಬಾಗಿಲು ತೆರೆಯಲು ಬಂದಾಗ ಇಬ್ಬರು ಅಳುತ್ತಾ ಕುಳಿತಿದ್ದರು. ಇಬ್ಬರು ರಕ್ತದ ಮಡುವಿನಲ್ಲಿರುವುದನ್ನು ಗಮನಿಸಿ ವಿಚಾರಿಸಿದಾಗ ಯಾರೋ ಬಂದು ನಮಗೆ ಹೊಡೆದು ಹೋದರು ಎಂದು ತಿಳಿಸಿದ್ದಾರೆ. ತಕ್ಷಣ ಶಫಿಕ್ ಅವರು ಉಪ್ಪಾರ್‍ಪೇಟೆಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಠಾಣೆಯಲ್ಲಿದ್ದ ಸಬ್‍ಇನ್ಸ್‍ಪೆಕ್ಟರ್ ಮೋಹನ್ ಅವರು ಹೊಯ್ಸಳ ಸಿಬ್ಬಂದಿಗೆ ತಿಳಿಸಿ ಸ್ಥಳಕ್ಕೆ ಬಂದು ಅಬ್ಯುಲೆನ್ಸ್‍ಗೆ ಕರೆ ಮಾಡಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಅಂಬ್ಯುಲೆನ್ಸ್ ಬಂದಿದ್ದು, ಸಾರ್ವಜನಿಕರು ಹಾಗೂ ಪೊಲೀಸರ ಸಹಾಯದಿಂದ ಗಾಯಗೊಂಡಿದ್ದ ನಾಲ್ವರು ಯುವಕರನ್ನು ಚಿಕಿತ್ಸೆಗಾಗಿ ಪೋಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಬಿಜೆಪಿ ಯತ್ನ ಫಲಿಸುವುದಿಲ್ಲ: ಕಾಂಗ್ರೆಸ್
ಆದರೆ ಮಧ್ಯಾಹ್ನ 12.30ರ ಸುಮಾರಿನಲ್ಲಿ ಸಂದೀಪ್ ಅಲಿಯಾಸ್ ಮಚ್ಚಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಶಫಿಕ್ ಅಹಮ್ಮದ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಾರಪೇಟೆ ಠಾಣೆ ಪೆÇಲೀಸರು ಘಟನಾ ಸ್ಥಳದ ಸುತ್ತ-ಮುತ್ತಲಿನ ಸಿಸಿ ಟಿವಿ ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಆರೋಪಿ ಮೊಹಮ್ಮದ್ ಥೈಸಿನ್‍ನನ್ನು ಬಂಸಿ ವಿಚಾರಣೆಗೊಳಪಡಿಸಿದ್ದಾರೆ.
Bengaluru, Majestic, Murder ,