ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವಾಂತರ : ನಿಲುವಳಿ ಸೂಚನೆಗೆ ಜೆಡಿಎಸ್ ನಿರ್ಧಾರ

Social Share

ಬೆಂಗಳೂರು,ಸೆ.15- ಭಾರೀ ಮಳೆಯಿಂದ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಜೆಡಿಎಸ್ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಮುಂದಾಗಿದೆ. ಮಾಗಡಿ ಶಾಸಕ ಎ.ಮಂಜುನಾಥ್ ಈ ಸಂಬಂಧ ನಿಲುವಳಿ ಸೂಚನೆ ನೋಟಿಸ್‍ನ್ನು ವಿಧಾನಸಭೆ ಕಾರ್ಯದರ್ಶಿಯವರಿಗೆ ನೀಡಿದ್ದು, ದಶಪಥ ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ಹಗರಣದ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ಕೋರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ನ್ನು ಬೆಂಗಳೂರು -ಮೈಸೂರು ನಡುವೆ ದಶಪಥ ರಸ್ತೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಭಾರೀ ಮಳೆಯಿಂದ ರಾಮನಗರ, ಚನ್ನಪಟ್ಟಣ, ಮಾಗಡಿ ಪಟ್ಟಣಗಳನ್ನು ಜೋಡಿಸುವ ರಸ್ತೆಗಳು ಹಾಳಾಗಿವೆ ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : BIG NEWS : ಉಕ್ರೇನ್‍ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ

ರಸ್ತೆಗಳಲ್ಲಿ ವಾಹನಗಳು ಸಂಚರಿಸಲಾಗದಷ್ಟು ಹದಗೆಟ್ಟಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಕೆಳಸೇತುವೆ, ಮೇಲ್ಸೇತುವೆ ಹಾಗೂ ಎಂಬ್ಯಾಕ್‍ಮೆಂಟ್‍ಗಳನ್ನು ವೃಷಭಾವತಿ, ಅರ್ಕಾವತಿ, ಶಿಂಷಾ ನದಿಗಳ ಕಣಿವೆಗಳಿಗೆ ಹರಿದು ಹೋಗುವ ನೀರಿಗೆ ಅಡ್ಡ ಕಟ್ಟಿರುವ ಮತ್ತು ಸರ್ವೀಸ್ ರಸ್ತೆಗಳಿಗೆ ರಸ್ತೆಬದಿ ಚರಂಡಿ ನಿರ್ಮಿಸದೆ ಇರುವುದು ನೆರೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಇದರಿಂದ ಸ್ಥಳೀಯರಿಗೆ, ಸಾರ್ವಜನಿಕರಿಗೆ, ರೈತರಿಗೆ ತುಂಬ ತೊಂದರೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಆಸ್ತಿಪಾಸ್ತಿಗೂ ಹಾನಿಯಾಗಿದೆ. ನೀರಿನಲ್ಲಿ ಮುಳುಗಿದ್ದ ವಾಹನಗಳು ಕೆಟ್ಟು ನಿಂತಿವೆ.

ಪರಿಹಾರಕ್ಕೆ ಸಾವಿರಾರು ಕೋಟಿ ರೂ. ಅನುದಾನದ ಅವಶ್ಯಕತೆ ಯಿದ್ದು, ಈ ವಿಷಯವನ್ನು ಸದನದಲ್ಲಿ ಮಂಡಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.

Articles You Might Like

Share This Article