ಪೀಣ್ಯ ಎಲಿವೇಟೆಡ್ ಕಾಮಗಾರಿ 3 ತಿಂಗಳಲ್ಲಿ ಪೂರ್ಣ

Social Share

ಬೆಂಗಳೂರು,ಸೆ.20- ಬೆಂಗಳೂರು-ಮುಂಬೈ ಸಂಪರ್ಕಿಸುವ ಪೀಣ್ಯ ಎಲಿವೆಟೆಡ್ ಕಾಮಾಗಾರಿ ಡಿಸೆಂಬರ್ ತಿಂಗಳಿಗೆ ಪೂರ್ಣಗೊಳ್ಳಲಿದ್ದು ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಳೆದ ವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಬಂದಾಗ ನಾನು ಈ ವಿಷಯವನ್ನು ಪ್ರಸ್ತಾಪಿಸಿ ತುರ್ತಾಗಿ ಈ ಕಾಮಗಾರಿಯನ್ನು ಮುಗಿಸಿಕೊಡಲು ಮನವಿ ಮಾಡಿದ್ದೆ. ಫ್ಲೈಓವರ್ ಮೇಲೆ ನಡೆಸಲು ಉದ್ದೇಶಿಸಿರುವ ಕಾಮಗಾರಿಗಳ ಪ್ರಸ್ತಾವನೆಯನ್ನು ಸಿದ್ದಪಡಿಸಿ ನಮ್ಮ ಇಲಾಖೆಗೆ ಸಲ್ಲಿಸಿದರೆ ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ಈಗಾಗಲೇ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಲು ಸೂಚಿಸಿದ್ದೇನೆ. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಉತ್ತರಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಮಂಜುನಾಥ್.ಆರ್ ಅವರ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಉತ್ತರಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಬೊಮ್ಮಾಯಿ,ಇದು ಅತ್ಯಂತ ಪ್ರಮುಖ ರಸ್ತೆ ಎಂಬುದು ಸರ್ಕಾರದ ಗಮನದಲ್ಲಿದೆ.

ಬೆಂಗಳೂರಿನಿಂದ ಪುಣೆ, ಮುಂಬೈ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಸಾವಿರಾರು ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತವೆ. ಹಾಗಾಗಿ ತುರ್ತಾಗಿ ಲೋಕೋಪಯೋಗಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಅಧಿಕಾರಗಳ ಜೊತೆ ಸಭೆ ನಡೆಸಿ ಡಿಸೆಂಬರ್ ಒಳಗೆ ಮುಗಿಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ಸಿ.ಸಿ.ಪಾಟೀಲ್ ಮಾತನಾಡಿ, ಈ ಫ್ಲೈಓವರ್‍ನಲ್ಲಿ ತಾಂತ್ರಿಕ ಕಾರಣಗಳಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ಫ್ಲೈಓವರ್ 4.35 ಕಿ.ಮೀ ಉದ್ದವಿದ್ದು ಅಲ್ಲಲ್ಲಿ ನೀರು ನಿಲ್ಲುತ್ತಿರುವುದರಿಂದ ಡ್ರೇನೇಜ್‍ಗಳ ಕಾರ್ಯಕ್ಷಮತೆ ಕುರಿತು ಪರಿವೀಕ್ಷಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನಾಲ್ಕು ಕಡೆ ಟ್ರಿಟ್ರೆಸ್ಡ್ ಕೇಬಲ್‍ಗಳು ಹಾನಿಗೊಳಗಾಗಿರುವುದು ಕಂಡುಬಂದಿತು.

ಹೀಗಾಗಿ ಬೆಂಗಳೂರಿನ ಐಐಎಸ್‍ಸಿ ನೀಡಿದ ವರದಿ ಆಧಾರದ ಮೇಲೆ 16-02-2022ರಂದು ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೇವೆ. ಆದರೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದರು.
ಈ ಫ್ಲೈಓವರ್‍ನ ರಚನಾತ್ಮಕ ಸುಸ್ಥಿತಿಯ ಕುರಿತು ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಬಾಂಬೆ, ಮುಂಬೈನಿಂದ ತಜ್ಞರ ವರದಿ ಬರಬೇಕು. ಈಗಿರುವ ಅಂದಾಜಿನಂತೆ ಡಿಸೆಂಬರ್ ವೇಳೆಗೆ ಭಾರೀ ವಾಹನಗಳ ಸಂಚಾರಕ್ಕೆ ಅನುವಾಗಲಿದೆ ಎಂದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ಮಂಜುನಾಥ್, ಈ ಭಾಗದಲ್ಲಿ ಇದು ಅತ್ಯಂತ ಪ್ರಮುಖವಾದ ಫ್ಲೈಓವರ್ ಆಗಿದೆ. ಇಲ್ಲಿಂದ ಮಹಾರಾಷ್ಟ್ರಹಾಗೂ ಅನೇಕ ಜಿಲ್ಲೆಗಳಿಗೆ ವಾಹನಗಳು ಸಂಚರಿಸಬೇಕು. ಪ್ರತಿನಿತ್ಯ ಲಕ್ಷಾಂತರ ಸರಕು ಸಾಗಾಣಿಕೆ ವಾಹನಗಳು ಹೋಗಬೇಕು.

ಈಗ ಮೇಲೆ ವಾಹನ ಸಂಚರಿಸದ ಕಾರಣ ಸರ್ವೀಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಇತ್ತೀಚೆಗೆ ಐಕ್ಯ ಎಂಬ ಬಹುರಾಷ್ಟ್ರೀಯ ಕಂಪನಿ ಪ್ರಾರಂಭವಾಗಿರುವುದರಿಂದ ಸಾವಿರಾರು ವಾಹನಗಳು ಸಂಚರಿಸುವುದರಿಂದ ದಟ್ಟಣೆ ಹೆಚ್ಚಾಗುತ್ತಿದೆ. ಅಪಾರ್ಟ್‍ಮೆಂಟ್‍ಗಳು ಇರುವುದರಿಂದ ಇದಕ್ಕೆ ತೊಂದರೆಯಾಗುತ್ತದೆ ಸರ್ಕಾರ ಇದನ್ನು ಪರಿಹರಿಸಬೇಕೆಂದು ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ಕಾರ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದರು.

Articles You Might Like

Share This Article