ಬೆಂಗಳೂರು, ಮಾ.18- ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಿದ್ದ ಶೇ.50ರಷ್ಟು ರಿಯಾಯಿತಿ ಸೌಲಭ್ಯಕ್ಕೆ ಇಂದು ರಾತ್ರಿ ಕೊನೆಯ ದಿನವಾಗಿದ್ದು, ವಾಹನ ಸವಾರರು ಸ್ವಯಂ ಪ್ರೇರಿತರಾಗಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಆನ್‍ಲೈನ್‍ನಲ್ಲಿ ಪಾವತಿಸಿದರು.
ಕಳೆದ 14 ದಿನಗಳಿಂದ ಒಟ್ಟು 10.37 ಕೋಟಿ ದಂಡ ಸಂಗ್ರಹವಾಗಿದೆ. ಇಂದು ರಾತ್ರಿ 12 ಗಂಟೆ ವೇಳೆಗೆ ಇನ್ನೂ ಮೂರರಿಂದ ನಾಲ್ಕು ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಸವಾರರು ಉತ್ಸಾಹದಿಂದ ದಂಡ ಪಾವತಿ ಮಾಡಿದ್ದರು. ಆದರೆ ಎರಡನೆ ಬಾರಿ ನೀಡಿದ್ದ ಅವಕಾಶದಲ್ಲಿ ತುಸು ಕಡಿಮೆಯಾಗಿದೆ.
ಹೆಚ್ಚಿನ ವಾಹನ ಸವಾರರು ಈ ಬಾರಿ ಠಾಣೆಗಳಿಗೆ ಬಾರದೆ ಆನ್‍ಲೈನ್ ಹಾಗೂ ನಗರದ ವಿವಿಧ ಕಡೆ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರ ಬಳಿ ಪಾವತಿಸಿ ರಶೀದಿ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು. ಕಳೆದ ಬಾರಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 43.35 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 126 ಕೋಟಿ ದಂಡ ಸಂಗ್ರಹವಾಗಿತ್ತು.
ಮತ್ತೆ ಈ ಅವಕಾಶ ಬರುತ್ತೋ ಗೊತ್ತಿಲ್ಲ. ಭಾರೀ ದಂಡಕ್ಕೆ ಅರ್ಧ ದಂಡ ಪಾವತಿಸಿ ನಿರ್ಭೀತಿಯಿಂದ ವಾಹನ ಚಾಲನೆ ಮಾಡಬಹುದು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಮೊತ್ತ ಹೆಚ್ಚಾಗಿರುವುದರಿಂದ ಕಡ್ಡಾಯವಾಗಿ ಎಲ್ಲಾ ವಾಹನ ಸವಾರರು ನಿಯಮಗಳನ್ನು ಪಾಲಿಸಿ ದಂಡದಿಂದ ದೂರವಿರಿ ಎಂದು ದಂಡ ಪಾವತಿಸಿದ ವಾಹನ ಸವಾರರೊಬ್ಬರು ತಮ್ಮ ಅನಿಸಿಕೆ ತಿಳಿಸಿದ್ದಾರೆ.
Bengaluru, Police, 50% discount, traffic, fine, payments,