ಹುಡುಗೀರನ್ನ ಚುಡಾಯಿಸುವವರಿಗೆ ಕಮಲ್‍ಪಂತ್ ಖಡಕ್ ವಾರ್ನಿಂಗ್

Social Share

ಬೆಂಗಳೂರು, ಫೆ.26- ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಹೆಣ್ಣು ಮಕ್ಕಳನ್ನು ಚುಡಾಯಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಎಚ್ಚರಿಸಿದ್ದಾರೆ. ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಜನಸಂಪರ್ಕ ದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿರುವ ಆಯುಕ್ತರು, ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾರೆ ಎಂಬ ದೂರು ಕೇಳಿಬಂದಿದೆ.
ಈ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದರೆ ಹೊಯ್ಸಳ ಪೊಲೀಸರು ಕ್ಷಣಾರ್ಧದಲ್ಲಿ ಸ್ಥಳಕ್ಕೆ ಬರುತ್ತಾರೆ ಎಂದು ತಿಳಿಸಿದರು.ಅಪ್ರಾಪ್ತರು ಬೈಕ್‍ಗಳಲ್ಲಿ ವೀಲಿಂಗ್ ಮಾಡುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಅಪ್ರಾಪ್ತ ಯುವಕರು ವೀಲಿಂಗ್ ಮಾಡಿ ಸಿಕ್ಕಿಬಿದ್ದರೆ ಅವರ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಗರದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಹೊಯ್ಸಳ ಪೊಲೀಸರು ದಿನದ 24 ಗಂಟೆಯೂ ರೌಂಡ್ಸ್‍ನಲ್ಲಿರುತ್ತಾರೆ. ಸಾರ್ವಜನಿಕರಿಗೆ ಯಾರಿಂದ ಏನೇ ತೊಂದರೆಯಾದರೂ ಕಂಟ್ರೋಲ್‍ರೂಂಗೆ ತಿಳಿಸಿದರೆ ತಕ್ಷಣ ಹೊಯ್ಸಳ ಪೊಲೀಸರು ನಿಮ್ಮ ನೆರವಿಗೆ ದಾವಿಸುತ್ತಾರೆ ಎಂದು ಆಯುಕ್ತರು ಅಭಯ ನೀಡಿದರು.
ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೂರು, ವೀರಸಂದ್ರದ ಬಳಿ ಕಿರಾಣಿ ಅಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆ ಅಪ್ರಾಪ್ತರು ಬಂದು ಮದ್ಯ ಖರೀದಿಸಿ ನಿರ್ಜನ ಪ್ರದೇಶದ ಬಳಿ ಹೋಗಿ ಮದ್ಯ ಸೇವಿಸಿ ಒಂಟಿಯಾಗಿ ಹೋಗುವ ಮಹಿಳೆಯರನ್ನು ಚುಡಾಯಿಸುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹೇಳಿದರು.
ಆಯುಕ್ತರು ಈ ಬಗ್ಗೆ ಪ್ರತಿಕ್ರಿಯಿಸಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡುಬಂದರೆ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾರ್ವಜನಿಕರು ತಮ್ಮ ಮನೆಗೆ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ರಸ್ತೆ ಕಾಣುವಂತೆ ತಿರುಗಿಸಿದರೆ ಆ ವ್ಯಾಪ್ತಿಯಲ್ಲಿ ಆಗುವ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಹಾಯವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಇದೇ ವೇಳೆ ಮನವಿ ಮಾಡಿದರು.

Articles You Might Like

Share This Article