ರಸ್ತೆಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಕೆ, ಬಯಲಾಯ್ತು ಬಿಬಿಎಂಪಿ ಬಂಡವಾಳ

Social Share

ಬೆಂಗಳೂರು,ಅ.22- ರಸ್ತೆ ಗುಂಡಿಗಳನ್ನು ಡಾಂಬರ್‌ನಿಂದ ಮುಚ್ಚದೆ ಕಟ್ಟಡ ತ್ಯಾಜ್ಯ ಸುರಿಯುವ ಮೂಲಕ ಸಿಲಿಕಾನ್ ಸಿಟಿಯ ಮಾನವನ್ನು ಮತ್ತೊಮ್ಮೆ ಹರಾಜು ಹಾಕಲು ಬಿಬಿಎಂಪಿ ನಿರ್ಧರಿಸಿದ್ದಂತಿದೆ.

ಇತ್ತಿಚೆಗೆ ಬಿದ್ದ ಮಳೆಯಿಂದ ನಗರದ ರಸ್ತೆಗಳು ಗುಂಡಿಮಯವಾಗಿ ಪರಿವರ್ತನೆಗೊಂಡಿವೆ. ಶೀಘ್ರದಲ್ಲೇ ಗುಂಡಿ ಮುಕ್ತ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದ ಬಿಬಿಎಂಪಿಯವರು ರಸ್ತೆ ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ.

ವಿಜಯನಗರ ಸುತ್ತಮುತ್ತಲ ರಸ್ತೆಗಳಲ್ಲಿ ಬಿದ್ದಿರುವ ಹಾಳುದ್ದ ಗುಂಡಿಗಳಿಗೆ ಟ್ರ್ಯಾಕ್ಟರ್ ಮೂಲಕ ಕಟ್ಟಡ ತ್ಯಾಜ್ಯ ಸುರಿಯುತ್ತಿರುವ ಚಿತ್ರಗಳು ಈ ಸಂಜೆಗೆ ಲಭ್ಯವಾಗಿವೆ. ಇನ್ನೊಮ್ಮೆ ಭಾರಿ ಮಳೆಯಾದರೆ, ಕಟ್ಟಡ ತ್ಯಾಜ್ಯದಿಂದ ಮುಚ್ಚಿರುವ ರಸ್ತೆಗಳು ಮತ್ತಷ್ಟು ಬಾಯ್ತೆರೆದುಕೊಂಡು ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿದ್ದರೂ ಬಿಬಿಎಂಪಿಯವರು ಯಾಕೆ ಇಂತಹ ಕಾರ್ಯಕ್ಕೆ ಕೈ ಹಾಕಿದ್ದಾರೆ ಎನ್ನುವುದೇ ಆರ್ಥವಾಗುತ್ತಿಲ್ಲ.

243 ವಾರ್ಡ್‍ಗಳನ್ನು ತನ್ನ ಸುಪರ್ದಿಯಲ್ಲಿರಿಸಿಕೊಂಡಿರುವ ಬಿಬಿಎಂಪಿ ಆಡಳಿತಕ್ಕೆ ಗುಂಡಿ ಮುಚ್ಚಲು ಸಾಕಾಗುವಷ್ಟು ಡಾಂಬರು ಇಲ್ಲವೆ ಎಂಬ ಪ್ರಶ್ನೆ ಕಾಡುತ್ತಿದೆ.

ರಸ್ತೆ ಗುಂಡಿಗಳಿಂದ ತನ್ನ ಮಾನವನ್ನು ಹರಾಜು ಹಾಕಿಕೊಂಡಿರುವ ಬಿಬಿಎಂಪಿಯವರು ಇಂದಿನಿಂದ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು. ಇಂದಿನಿಂದ ಸುಮಾರು 10 ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿಲ್ಲ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಗುಂಡಿ ಮುಚ್ಚುವ ಕಾರ್ಯಕ್ಕೆ ಇಂದಿನಿಂದ ಚಾಲನೆ ನೀಡಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

ಗುಂಡಿಗಳನ್ನು ಡಾಂಬರ್‌ನಿಂದ ಮುಚ್ಚದೆ ಕಟ್ಟಡ ತ್ಯಾಜ್ಯ ಬಳಕೆ ಮಾಡುತ್ತಿರುವುದರಿಂದ ಮುಂದೆ ಮಳೆಯಾದರೆ ಮತ್ತಷ್ಟು ಅನಾಹುತ ಎದುರಿಸಲು ಸಿಲಿಕಾನ್ ಸಿಟಿ ಜನ ಸಿದ್ಧರಾಗಬೇಕಿದೆ.

Articles You Might Like

Share This Article