ಬೆಂಗಳೂರು, ಡಿ.14- ಮಳೆಗೆ ಕಿತ್ತುಬಂದ ರಸ್ತೆ ಡಾಂಬರು.. ಮತ್ತೆ ಸೃಷ್ಟಿಯಾಯ್ತು ಸಿಲಿಕಾನ್ ಸಿಟಿಯಲ್ಲಿ ಗುಂಡಿ ಗಂಡಾಂತರ… ಕಳೆದ ಒಂದು ವಾರದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ರಸ್ತೆಗಳು ಹಾಳಾಗಿ ಗುಂಡಿಮಯವಾಗಿದ್ದು, ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಲಾಗಿತ್ತು. ಮತ್ತೆ ಗುಂಡಿಗಳ ಸಂಖ್ಯೆ ದ್ವಿಗುಣವಾಗುತ್ತಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಪಾಲಿಕೆಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ನಾಗರಬಾವಿ ಮುಖ್ಯರಸ್ತೆ, ಆರ್‍ಟಿ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಮಡಿವಾಳ,
ಗುರ್ರಪ್ಪನಪಾಳ್ಯ, ತಿಲಕ್‍ನಗರ, ಜೆಸಿ ರಸ್ತೆ, ಹೆಬ್ಬಾಳ, ಉಲ್ಲಾಳ ಸೇರಿದಂತೆ ವಿವಿಧೆಡೆ ಮಳೆಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ನೀರು ತುಂಬಿಕೊಂಡಿದೆ. ಕಳೆದ ತಿಂಗಳು ಬಿಬಿಎಂಪಿ ನಗರವನ್ನು ಗುಂಡಿಮುಕ್ತವನ್ನಾಗಿ ಮಾಡಲು ಕ್ರಮ ಕೈಗೊಂಡಿತ್ತು. ಆದರೆ, ಗುರಿ ಮುಟ್ಟುವಷ್ಟರಲ್ಲಿ ಮಳೆಯಿಂದ ಎಲ್ಲವೂ ವಿಫಲವಾಗಿದೆ.
ದಂಪತಿಗೆ ರಾಡ್ ನಿಂದ ಹೊಡೆದು ದರೋಡೆ ಮಾಡಿದ್ದ ಆಸಾಮಿ ಅಂದರ್
ಮೇ ತಿಂಗಳಿನಿಂದ ಈವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 31,211 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಈವರೆಗೆ 24,957 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 6254 ಗುಂಡಿಗಳನ್ನು ಮುಚ್ಚಲಾಗುವುದು ಎಂದು ಪಾಲಿಕೆ ತಿಳಿಸಿದೆ. ಆದರೆ, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ನಗರದ ರಸ್ತೆಗಳು ಗುಂಡಿಮಯವಾಗಿರುವುದು ಮತ್ತು ಕಳಪೆ ಕಾಮಗಾರಿ ಎದ್ದುಕಾಣುತ್ತಿದೆ.
ವಾಹನ ಸವಾರರು ಗುಂಡಿ ಬಗ್ಗೆ ಪ್ರತಿಕ್ರಿಯಿಸಿ, ಬಿಬಿಎಂಪಿ ದೊಡ್ಡ ದೊಡ್ಡ ಗುಂಡಿಗಳನ್ನಷ್ಟೇ ಮುಚ್ಚುತ್ತಿದೆ. ವಾರ್ಡ್ ರಸ್ತೆ ಹಾಗೂ ಗಲ್ಲಿ ರಸ್ತೆಗಳನ್ನು ಮುಚ್ಚುತ್ತಿಲ್ಲ. ಇದರಿಂದಲೂ ಸಹ ತೊಂದರೆಯಾಗುತ್ತಿದೆ. ಕೆಲವೆಡೆ ಜಲ್ಲಿ ಎಂ ಸ್ಯಾಂಡ್ ಹಾಕಿ ಕೆಲವು ದಿನಗಳೇ ಕಳೆದಿವೆ. ಡಾಂಬರು ಮಾತ್ರ ಹಾಕಿಲ್ಲ. ಇದರಿಂದ ಸ್ಕೂಟರ್‍ಗಳು ಸ್ಕಿಡ್ ಆಗಿ ತೊಂದರೆಯಾಗುತ್ತಿದೆ. ಜನರ ಕಣ್ಣೊರೆಸಲು ಕಳಪೆ ಕಾಮಗಾರಿ ಮಾಡಿ ಗುಂಡಿ ಮುಚ್ಚಲಾಗಿತ್ತು.
ಬೌಬೌ ಸಿಟಿಯಾದ ಬೆಂಗಳೂರು, ಮಿತಿಮೀರಿದ ಬೀದಿ ನಾಯಿಗಳ ಹಾವಳಿ
ಈಗ ಮತ್ತೆ ಗುಂಡಿಗಳು ರಾರಾಜಿಸುತ್ತಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ರಸ್ತೆ ಗುಂಡಿಗಳಿಗೆ ಮುಕ್ತಿ ದೊರೆಯುವಂತಾಗಲಿ.