ಬೆಂಗಳೂರು,ಅ.11- ನಗರದಲ್ಲಿ ಪ್ರಧಾನಿ ಮೋದಿ ಸಂಚರಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪುನರ್ ಪರಿಶೀಲನೆ ಮಾಡುವಂತೆ ಆದೇಶಿಸಿರುವುದು ಪ್ರಭಾವಿ ಸಚಿವರ ಸಂಬಂಧಿ ಹಾಗೂ ಆಪ್ತ ಗುತ್ತಿಗೆದಾರರೊಬ್ಬರ ಕುತ್ತಿಗೆಗೆ ಬಂದಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದು ಹೋಗಿದ್ದ ಸಂದರ್ಭದಲ್ಲಿ ಅವರ ಸಂಚರಿಸುವ 14 ಕಿ.ಮೀ ಉದ್ದದ ರಸ್ತೆಯನ್ನು ದುರಸ್ತಿಪಡಿಸಲಾಗಿತ್ತು.
ಮೋದಿ ಬಂದು ಹೋದ ಕೆಲವೇ ದಿನಗಳಲ್ಲಿ ಅವರು ಸಂಚರಿಸಿದ್ದ ದಾರಿಯಲ್ಲಿ ಹಾಕಿದ್ದ ಡಾಂಬರು ಸಂಪೂರ್ಣ ಕಿತ್ತುಬಂದಿತ್ತು. ಹಾಳಾದ ರಸ್ತೆಗಳ ವಿಡಿಯೋ ತುಣುಕುಗಳೊಂದಿಗೆ ಕೆಲವರು ಪ್ರಧಾನಿ ಮಂತ್ರಿಗಳಿಗೆ ದೂರು ನೀಡಿದ್ದರು. ಮಾತ್ರವಲ್ಲ ಟ್ವಿಟರ್ನಲ್ಲಿ ಹಾಳಾದ ರಸ್ತೆಗಳ ಚಿತ್ರ ಹಾಕಿದ್ದ ಪರಿಣಾಮ ಸಿಲಿಕಾನ್ ಸಿಟಿಯ ಮಾನ ದೇಶಾದ್ಯಂತ ಹರಾಜಾಗಿತ್ತು.
ಮೋದಿ ಬಂದು ಹೋದ ಸಂದರ್ಭದಲ್ಲಿ ಮಾಡಿದ ಕಾಮಗಾರಿಗಳೇ ಕಳಪೆಯಾಗಿದೆ ಎಂಬ ಆರೋಪವನ್ನು ಸರ್ಕಾರಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಮೋದಿ ಬಂದು ಹೋದ ಸಂದರ್ಭದಲ್ಲಿ ಮಾಡಿದ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತರೇ ಪರಿಶೀಲಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಅದರಲ್ಲೂ ಮೋದಿ ಅವರ ಭಾಷಣಕ್ಕೆ ವೇದಿಕೆ ಕಲ್ಪಿಸಲಾಗಿದ್ದ ಕೊಮ್ಮಘಟ್ಟ ರಸ್ತೆ ಕಾರ್ಯಕ್ರಮ ನಡೆದ ಮರುದಿನವೇ ಹಾಳಾದ ಪರಿಣಾಮ ಇಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಎಲ್ಲೇಡೆ ಕೇಳಿ ಬಂದಿತ್ತು.
ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಬೆಂಗಳೂರು ವಿವಿ ರಸ್ತೆ, ತುಮಕೂರು ರಸ್ತೆ ಹಾಗೂ ಕೊಮ್ಮಘಟ್ಟ ರಸ್ತೆ ಸೇರಿದಂತೆ ಸುಮಾರು 14 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು 24 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು.
ಇಷ್ಟೊಂದು ಹಣ ಖರ್ಚು ಮಾಡಿ ರಸ್ತೆ ದುರಸ್ತಿ ಪಡಿಸಿದರು ಮೋದಿ ಬಂದು ಹೋದ ಕೆಲವೇ ದಿನಗಳಲ್ಲಿ ಹಲವಾರು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದೆ.
ಇದರ ಜೊತೆಗೆ ಸಂಬಂಧಪಟ್ಟ ಮುಖ್ಯ ಎಂಜಿನಿಯರ್ ಅವರಿಂದ ಹಾಗೂ ಪ್ರತಿಷ್ಠಿತ ಸಂಸ್ಥೆಯಿಂದ ರಸ್ತೆ ದುರಸ್ತಿ ಕಾಮಗಾರಿಯ ಗುಣಮಟ್ಟ ತಪಾಸಣೆ ನಡೆಸಿ ವರದಿ ನೀಡುವಂತೆಯೂ ಸರ್ಕಾರ ಆಯುಕ್ತರಿಗೆ ಸೂಚನೆ ನೀಡಿದೆ.
ವರದಿ ಕೈ ಸೇರುವವರೆಗೆ ಕಾಮಗಾರಿಯ ಬಿಲ್ ಬಿಡುಗಡೆ ಮಾಡದಂತೆಯೂ ಸೂಚನೆ ನೀಡಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಕಳಪೆ ಕಾಮಗಾರಿ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ಇಬ್ಬರು ಗುತ್ತಿಗೆದಾರರಿಗೆ ನಡುಕ ಶುರುವಾಗಿದೆ. ಕಾಮಗಾರಿ ನಡೆಸಿದ ಗುತ್ತಿಗೆದಾರರಲ್ಲಿ ಒಬ್ಬ ಪ್ರಭಾವಿ ಸಚಿವರ ಹತ್ತಿರದ ಸಂಬಂಧಿಯಾಗಿದ್ದು, ಈತ ನಡೆಸಿರುವ ಬಹುತೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಮಾಮೂಲಾಗಿದೆ.
ಈ ಹಿಂದೆ ಇದೆ ಗುತ್ತಿಗೆದಾರರನ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯರೊಬ್ಬರು ಗಂಭೀರ ಆರೋಪ ಮಾಡಿ ಆತನ ಕರ್ಮಕಾಂಡವನ್ನು ಬಯಲು ಮಾಡಿದ್ದರು. ಆದರೂ ಅತ ಎಚ್ಚೆತ್ತುಕೊಳ್ಳದೆ ಯಾರು ಏನು ಮಾಡೋಕೆ ಆಗೋಲ್ಲ ಎಂಬಂತೆ ಮೋದಿ ಸಂಚರಿಸಿದ್ದ ಮಾರ್ಗಗಳ ದುರಸ್ತಿ ಕಾಮಗಾರಿಯನ್ನು ಕಳಪೆ ಮಾಡುವ ಮೂಲಕ ತನ್ನ ಪಾಲಿಗೆ ತಾನೇ ಗುಂಡಿ ತೋಡಿಕೊಂಡಿದ್ದಾನೆ.
ಇನ್ನೊಬ್ಬ ಗುತ್ತಿಗೆದಾರ ಸಚಿವರೊಬ್ಬರ ಪರಮಾಪ್ತರಾಗಿದ್ದು, ಅವರು ಕೂಡ ನನಗೆ ಪ್ರಭಾವಿಗಳ ಪರಿಚಯವಿದೆ ಎಂಬ ಸೊಕ್ಕಿನಿಂದ ಹಲವಾರು ಭಾರಿ ಕಳಪೆ ಕಾಮಗಾರಿ ಮಾಡಿರುವುದೇ ಅಲ್ಲದೆ ಅದೆಷ್ಟೋ ಕಾಮಗಾರಿಗಳನ್ನು ನಡೆಸದೆ ಬಿಲ್ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಒಟ್ಟಾರೆ, ತಮಗೆ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎನ್ನುವ ಅಹಂಕಾರದಿಂದ ಪ್ರಧಾನಿಗಳು ಸಂಚರಿಸುವ ರಸ್ತೆ ದುರಸ್ತಿ ಕಾಮಗಾರಿಯನ್ನು ತಮ್ಮ ಕೈಚಳಕ ತೊರಿಸಲು ಹೋಗಿ ಇದೀಗ ತಾವೇ ಖೆಡ್ಡಾಕ್ಕೆ ಬಿದ್ದಿದ್ದಾರೆ.