ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೊಂದು ಬಲಿ, ಸುಪ್ರೀತ್ ಸಾವಿಗೆ ಹೊಣೆಯಾರು..?

Social Share

ಬೆಂಗಳೂರು,ಆ.22- ನಗರದ ರಸ್ತೆಗುಂಡಿಗಳ ಗಂಡಾಂತರಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕೋ? ಆ ದೇವರೇ ಬಲ್ಲ.
ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದರೂ ಬಿಬಿಎಂಪಿಯವರು ಮಾತ್ರ ಬುದ್ದಿ ಕಲಿತಿಲ್ಲ. ಅವರ ಬೇಜವಾಬ್ದಾರಿತನಕ್ಕೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಪ್ರೀತ್ ಎಂಬುವರು ರಸ್ತೆಗುಂಡಿಯಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬ ಆಧಾರಸ್ಥಂಭ ಕಳೆದುಕೊಂಡು ಅನಾಥವಾಗಿದೆ.

ಸಿಂಡಿಕೇಟ್ ಲೇಔಟ್‍ನಲ್ಲಿರುವ ಟ್ರೀ ಬೈ ಪ್ರಾವಿಡೆಂಟ್ ಅಪಾರ್ಟ್‍ಮೆಂಟ್‍ನಲ್ಲಿ ಕುಟುಂಬ ಸಮೇತ ವಾಸವಿದ್ದರು.
ಕಳೆದ 18ರಂದು ಸುಪ್ರೀತ್ ಅವರು ತಮ್ಮ ಬೈಕಿನಲ್ಲಿ ಸುಂಕದಕಟ್ಟೆಯಿಂದ ಹೇರೋಹಳ್ಳಿ ಕಡೆಗೆ ಹೋಗುವಾಗ ರಾಮ್‍ರಾಜ್ ಗ್ರಾನೈಟ್ ಮುಂಭಾಗದ ರಸ್ತೆ ಮಧ್ಯದಲ್ಲಿದ್ದ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಹೇರೋಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಮಲ್ಲೇಶ್ವರಂನಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಅಂದಿನಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್ ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.

ಆಕ್ರೋಶ, ದೂರು ದಾಖಲು: ತುಂಬು ಜೀವನ ನಡೆಸುತ್ತಿದ್ದ ನನ್ನ ಸಹೋದರನ ಅಕಾಲಿಕ ಸಾವಿಗೆ ಬಿಬಿಎಂಪಿ ಅಧಿಕಾರಿಗಳೆ ಕಾರಣ. ರಸ್ತೆ ಗುಂಡಿ ಮುಚ್ಚಿಸದೆ ಹಲವಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಬಿಬಿಎಂಪಿಯವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಮಾಡದ ತಪ್ಪಿಗೆ ಪ್ರಾಣ ಕಳೆದುಕೊಂಡಿರುವ ಅಮಾಯಕರ ಕುಟುಂಬ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡುವವರೆಗೆ ಹೋರಾಟ ನಡೆಸುತ್ತೇನೆ ಎಂದು ಸುಪ್ರೀತ್ ಸಹೋದರ ಜೋಯಲ್ ಸುಮಂತ್‍ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನ್ಮ ಜಾಲಾಡಿದ್ದ ನ್ಯಾಯಾಲಯ: ನಗರದ ರಸ್ತೆ ಗುಂಡಿಗಳಿಂದ ಹಲವಾರು ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ಕಣ್ಮುಚ್ಚಿ ಕುಳಿತ ಬಿಬಿಎಂಪಿಯವರನ್ನು ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೂಡಲೇ ರಸ್ತೆಗುಂಡಿ ಮುಚ್ಚಿ ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಗಟ್ಟದಿದ್ದರೆ, ನಿಮ್ಮ ವಿರುದ್ಧವೇ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

ಬುದ್ದಿ ಕಲಿಯದ ಬಿಬಿಎಂಪಿ: ರಸ್ತೆ ಗುಂಡಿ ವಿಚಾರದಲ್ಲಿ ತಟಸ್ಥವಾಗಿದ್ದ ಬಿಬಿಎಂಪಿಯವರಿಗೆ ನ್ಯಾಯಾಲಯ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 15 ದಿನಗಳ ಒಳಗೆ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವ ಭರವಸೆ ನೀಡಿದ್ದರು.

ಆರಂಭದಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದರೂ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಮುಚ್ಚುವ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದರ ಜೊತೆಗೆ ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ನಗರದ ಹಲವಾರು ರಸ್ತೆಗಳು ಹಾಳಾಗಿದ್ದವು.
ಆದರಲ್ಲೂ ಸುಂಕದಕಟ್ಟೆಯಿಂದ ಹೇರೋಹಳ್ಳಿಗೆ ಸಾಗುವ ದಾರಿಯಂತೂ ತೀರ ಹಾಳಾಗಿತ್ತು. ಈ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುವುದರಿಂದ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಪ್ರಾಣ ಪಕ್ಷಿ ಹಾರಿ ಹೋಗುವುದಂತೂ ಸತ್ಯ ಎನ್ನುವಂತಿತ್ತು.

ಬಿಬಿಎಂಪಿಗೆ ಪತ್ರ ಬರೆದಿದ್ದ ಬ್ಯಾಡರಹಳ್ಳಿ ಪೊಲೀಸರು: ಸುಂಕದಕಟ್ಟೆಯಿಂದ ದೊಡ್ಡ ಗೊಲ್ಲರಹಟ್ಟಿವರೆಗಿನ ರಸ್ತೆ ತೀರಾ ಹಾಳಾಗಿದ್ದು, ಈ ಭಾಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಈ ಹಿಂದೆ ಬ್ಯಾಡರಹಳ್ಳಿ ಪೊಲೀಸರು ಬಿಬಿಎಂಪಿಯವರಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಆದರೂ ಬಿಬಿಎಂಪಿಯವರು ರಸ್ತೆ ದುರಸ್ತಿ ಮಾಡುವ ಗೋಜಿಗೆ ಹೋಗದ ಕಾರಣ ಮಾಗಡಿ ರಸ್ತೆಯಲ್ಲಿ ಹಲವಾರು ಗುಂಡಿ ಗಂಡಾಂತರಗಳು ಜರುಗಿ ಹಲವಾರು ಮಂದಿ ಗಾಯಗೊಂಡಿದ್ದು, ಹಲವಾರು ಜೀವಗಳು ಪ್ರಾಣ ಕಳೆದುಕೊಳ್ಳುವಂತಹ ಘಟನೆಗಳು ಜರುಗಿವೆ.

ಹಲವಾರು ಜೀವಗಳು ಬಲಿ: ಈ ಹಿಂದೆ ಇದೆ ಮಾಗಡಿ ರಸ್ತೆಯಲ್ಲಿ ಟ್ರಕ್ ಬೈಕ್‍ಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಹಿಂಬದಿ ಸವಾರರಾಗಿದ್ದ ಖಾಸಗಿ ಶಾಲೆ ಟೀಚರ್ ಶರ್ಮಿಳಾ ಪ್ರಕಾಶ್ ಎಂಬುವರು ಮೃತಪಟ್ಟಿದ್ದರು. ಅದೇ ರೀತಿ ಹಲವಾರು ರಸ್ತೆ ಅಪಘಾತ ಪ್ರಕರಣಗಳು ಮಾಗಡಿ ರಸ್ತೆಯಲ್ಲಿ ಸಂಭವಿಸಿವೆ. ಈ ಸಂದರ್ಭದಲ್ಲಿ ಶಿಕ್ಷಕಿ ಸಾವಿಗೆ ಹಾಳಾದ ರಸ್ತೆಯೇ ಕಾರಣ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಬಿಬಿಎಂಪಿಗೆ ಪತ್ರ ಬರೆದಿದ್ದೇವೆ ಎಂದು ತಿಪ್ಪೆ ಸಾರಿಸಿ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮೌನ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗುತ್ತಿಗೆದಾರರೇ ಹೊಣೆ: ರಸ್ತೆ ನಿರ್ಮಿಸುವ ಗುತ್ತಿಗೆದಾರರೇ 5 ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಇದುವರೆಗೂ ಯಾರೊಬ್ಬ ಗುತ್ತಿಗೆದಾರರು ಇಂತಹ ಕೆಲಸ ಮಾಡಿಲ್ಲ. ರಸ್ತೆ ನಿರ್ಮಿಸಿ ಬಿಲ್ ಮಾಡಿಸಿಕೊಂಡರೆ ಅವರ ಕೆಲಸ ಮುಗಿಯಿತು ಎಂಬಂತೆ ಮತ್ತೆ ಅತ್ತ ತಲೆ ಹಾಕಿ ಮಲಗುತ್ತಿರಲಿಲ್ಲ.

ಅಂತಹ ಗುತ್ತಿಗೆದಾರರಿಗೆ ಸ್ಥಳೀಯ ಜನಪ್ರತಿನಿಗಳ ಬೆಂಬಲವಿರುತ್ತಿದ್ದ ಕಾರಣ ಅವರನ್ನು ಯಾರು ಪ್ರಶ್ನಿಸುವಂತಿಲ್ಲ. ಇಂತಹ ಕೆಲವು ತಪ್ಪು ನಿರ್ಧಾರಗಳಿಂದಲೇ ಇಂದಿಗೂ ನಗರದ ರಸ್ತೆಗಳು ಗುಂಡಿ ಮುಕ್ತಗೊಂಡಿಲ್ಲ. ಅದರಿಂದ ಆಗುತ್ತಿರುವ ಸಾವು-ನೋವುಗಳು ತಪ್ಪುತ್ತಿಲ್ಲ ಎನ್ನುವುದು ಮಾತ್ರ ಘನ ಘೋರ ಸತ್ಯ.

Articles You Might Like

Share This Article