ರಾಜಧಾನಿ ಮಾಫಿಯಾ ಗ್ರಾಮಾಂತರಕ್ಕೆ ಶಿಫ್ಟ್ : ಹೆಡೆಮುರಿ ಕಟ್ಟುವರೇ ಅಲೋಕ್..?

Social Share

ನೆಲಮಂಗಲ,ಜ.19- ಸಿಲಿಕಾನ್ ಸಿಟಿ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಫಿಯಾ ರಾಜಧಾನಿಯಾಗಿ ಬದಲಾಗುತ್ತಿದೆಯೇ? ಹೌದು… ಈ ಭಾಗದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು, ಸ್ಕಿಲ್‍ಗೇಮ್‍ಗಳ ಹಾವಳಿ, ಇಸ್ಟಿಟ್ ಹಾಗೂ ಮಾಂಸದ ದಂಧೆಗಳು ಹಾಗೂ ರೌಡಿಸಂನಿಂದಾಗಿ ಇಂತಹ ಪರಿಸ್ಥಿತಿ ಬಂದೊದಗಿದೆ.

ರಾಜಧಾನಿಗೆ ಹೊಂದಿಕೊಂಡಂತಿರುವ ಜಿಲ್ಲೆಯಲ್ಲಿ ಭೂಮಿ ಬೆಲೆಗೆ ಬೂಮ್ ಬಂದಿರುವುದರಿಂದ ರಿಯಲ್ ಎಸ್ಟೆಟ್ ಜತೆಗೆ ಮಟ್ಕಾ, ಜೂಜು, ಸ್ಕಿಲ್‍ಗೇಮ್‍ಗಳು, ಇಸ್ಟಿಟ್ ಅಡ್ಡೆಗಳು ಹಾಗೂ ಮಸಾಜ್ ಪಾರ್ಲರ್‍ಗಳು ಗ್ರಾಮಾಂತರ ಪ್ರದೇಶಗಳಿಗೆ ಶಿಫ್ಟ್ ಆಗಿವೆ.

ಸಮಾಜದ ಕೊಳಕನ್ನು ತೊಳೆದು ಹಾಕಬೇಕಾದ ರಕ್ಷಕರೆ ಪರೋಕ್ಷವಾಗಿ ಮಾಫಿಯಾದ ರಕ್ಷಣೆಗೆ ನಿಂತಿರುವುದರಿಂದ ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಲೆ ಇದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ನೆಲಮಂಗಲದಲ್ಲಂತೂ ಹೇಳೋರೂ ಕೇಳೋರು ಯಾರು ಇಲ್ಲದಂತಾಗಿದೆ.

ರಾಜಧಾನಿ ಆಸುಪಾಸಿನಲ್ಲಿರುವ ನೆಲಮಂಗಲ ಉಪವಿಭಾಗದಲ್ಲಿ ನೆಲಮಂಗಲ ಪಟ್ಟಣ, ಗ್ರಾಮಾಂತರ, ಮಾದನಾಯಕನಹಳ್ಳಿ, ತ್ಯಾಮಗೊಂಡ್ಲು, ದಾಬಸ್‍ಪೇಟೆ ಹಾಗೂ ಸಂಚಾರಿ ಠಾಣೆ ಸೇರಿದಂತೆ ಆರು ಪೊಲೀಸ್ ಸ್ಟೇಷನ್‍ಗಳಿವೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಎಲ್ಲಾ ಠಾಣೆಗಳನ್ನು ವೃತ್ತ ನಿರೀಕ್ಷಕರ ಕಚೇರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಹೀಗಾಗಿ ಎಲ್ಲಾ ಠಾಣೆಗಳಲ್ಲೂ ವೃತ್ತ ನಿರೀಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಆದರೆ, ಅದಕ್ಕೆ ತಕ್ಕಂತೆ ಸಿಬ್ಬಂದಿಗಳ ಕೊರತೆ ನೀಗಿಸಲು ಮಾತ್ರ ಸರ್ಕಾರ ಮನಸ್ಸು ಮಾಡಿಲ್ಲ.

ಬಹುತೇಕ ಎಲ್ಲಾ ಠಾಣೆಗಳಲ್ಲಿ ಸಬ್ ಇನ್ಸ್‍ಪೆಕ್ಟರ್‍ಗಳ ಕೊರತೆ ಇರುವುದರಿಂದ ನೆಲಮಂಗಲ ಸುತ್ತಮುತ್ತ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಕೆಲವರು ಉದ್ದೇಶಪೂರ್ವಕವಾಗಿಯೇ ಅಕ್ರಮಗಳಿಗೆ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ರಕ್ಷಕರಿಂದಲೇ ರಕ್ಷಣೆ: ರಾಜಧಾನಿಯಲ್ಲಿ ಐದು ವರ್ಷಗಳ ಸೇವೆ ಸಲ್ಲಿಸುವ ಪೊಲೀಸ್ ಅಧಿಕಾರಿಗಳು ದೂರದ ಜಿಲ್ಲೆಗಳಿಗೆ ವರ್ಗಾವಣೆಗೊಳ್ಳುವುದರಿಂದ ತಪ್ಪಿಸಿಕೊಳ್ಳಲು ತಮ್ಮ ಗಾಡ್‍ಫಾದರ್‍ಗಳ ಕೃಪಾ ಕಟಾಕ್ಷದಿಂದ ಬೆಂಗಳೂರಿಗೆ ಹೊಂದಿಕೊಂಡಂತಿರುವ ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಪೋಸ್ಟಿಂಗ್ ಮಾಡಿಸಿಕೊಳ್ಳುತ್ತಾರೆ.

ಈ ರೀತಿ ವರ್ಗಾವಣೆಯಾಗಿ ಬಂದಿರುವ ಕೆಲ ಪೊಲೀಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ರಾತ್ರಿ ವೇಳೆಯಲ್ಲಿ ನಡೆಯಲಿರುವ ಕರಾಳ ದಂಧೆಗಳನ್ನು ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಕರೆಸಿಕೊಂಡು ಪರೋಕ್ಷವಾಗಿ ಮಾಫಿಯಾ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಇದರ ಜೊತೆಗೆ ನೆಲಮಂಗಲ ಠಾಣೆಗಳಲ್ಲಿ ಹಲವಾರು ವರ್ಷಗಳಿಂದ ಎಸ್‍ಬಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿರುವ ಕಾನ್ಸ್‍ಟೆಬಲ್‍ಗಳು ಹೊಸದಾಗಿ ಬರುವ ಪೊಲೀಸ್ ಅಧಿಕಾರಿಗಳಿಗೆ ಮಾಫಿಯಾದಿಂದ ಬರುವ ಹಣದ ರುಚಿ ತೋರಿಸಿ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಇದಕ್ಕೆ ಪೂರಕವೆಂಬಂತೆ ನೆಲಮಂಗಲ ವಿಭಾಗದ ಎಲ್ಲ ಠಾಣೆಗಳ ಎಸ್‍ಬಿ ವಿಭಾಗದಲ್ಲಿ ಡ್ಯೂಟಿ ಮಾಡುತ್ತಿರುವ ಹಲವಾರು ಮಂದಿ ಐದಾರು ಬಾರಿ ಸೇವೆಯಿಂದ ಅಮಾನತುಗೊಂಡಿರುವುದೇ ಸಾಕ್ಷಿಯಾಗಿದೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಂಗಳೂರಿನ ಹಲವಾರು ಮಂದಿ ತೋಟದ ಮನೆಗಳನ್ನು ಮಾಡಿಕೊಂಡು ವಾರಾಂತ್ಯದಲ್ಲಿ ಸ್ನೇಹಿತರು ಇಲ್ಲವೇ ಕುಟುಂಬದವರೊಂದಿಗೆ ತೆರಳಿ ಮೋಜು ಮಸ್ತಿ ನಡೆಸುವುದು ವಾಡಿಕೆ. ಇಂತಹ ತೋಟದ ಮನೆಗಳ ಮೇಲೆ ಸದಾ ಕಣ್ಣಿಟ್ಟಿರುವ ಅಲ್ಲಿನ ಪೊಲೀಸರು ಮಾಹಿತಿದಾರರಿಂದ ಮಾಹಿತಿ ತರಿಸಿಕೊಂಡು ಅಂತಹ ತೋಟಗಳ ಮೇಲೆ ದಾಳಿ ನಡೆಸಿ ಅವರ ವಿರುದ್ಧ ಪ್ರಕರಣ ದಾಖಲಿಸುವ ನೆಪದಲ್ಲಿ ಲಂಚ ಪಡೆಯುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಎಚ್ಚರಿಕೆಗೂ ಬಗ್ಗಿಲ್ಲ: ಸ್ವತಃ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಅಲೋಕ್ ಕುಮಾರ್ ಅವರೇ ಕೆಲ ದಿನಗಳ ಹಿಂದೆ ಬೆಂಗಳೂರಿನ ಅಕ್ರಮ ಚಟುವಟಿಕೆಗಳು ನೆಲಮಂಗಲಕ್ಕೆ ಸ್ಥಳಾಂತರಗೊಳ್ಳುತ್ತಿವೆ. ಹೀಗಾಗಿ ಅಲ್ಲಿನ ಪೊಲೀಸರು ಮಾಫಿಯಾದೊಂದಿಗೆ ಕೈ ಜೋಡಿಸದೆ ಸಮಾಜದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಕ್ರಮಕ್ಕೆ ಮುಂದಾಗಲಿ: ಹೈಫೈ ದಂಧೆ ನಡೆಸಿ ಗುಜರಾತ್‍ಗೆ ಪರಾರಿಯಾಗಿದ್ದ ಸ್ಯಾಂಟ್ರೋ ರವಿಯನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಯಶಸ್ವಿಯಾಗಿರುವ ನಾಡಿನ ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ನೆಲಮಂಗಲ ಸೇರಿದಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದರ ಜತೆಗೆ ಮಾಫಿಯಾದೊಂದಿಗೆ ಕೈ ಜೋಡಿಸಿರುವ ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡು ಜಿಲ್ಲೆಯನ್ನು ನೆಮ್ಮದಿಯ ತಾಣವನ್ನಾಗಿ ಪರಿವರ್ತಿಸಬೇಕು ಎನ್ನುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

Bengaluru, rowdyism, mafia, shifts, Nelamangala, police, ADGP, Alok Kumar,

Articles You Might Like

Share This Article