ಡ್ಯೂಟಿ ಟೈಮಲ್ಲಿ ಉದ್ಯೋಗಿಗಳಿಗೆ 30 ನಿಮಿಷ ನಿದ್ರಾ ವಿರಾಮ ಘೋಷಿಸಿದ ಕಂಪನಿ..!

Spread the love

ಬೆಂಗಳೂರು,ಮೇ8- ಕೆಲಸದಲ್ಲಿ ಅನಗತ್ಯವಾಗಿ ಕಾಲಹರಣ ಮಾಡುವವರು, ಸೋಮಾರಿಗಳಿಗೆ ನೋಟಿಸ್ ನೀಡುವುದು, ಕೆಲಸದಿಂದ ತೆಗೆದು ಹಾಕುವುದು ಸಾಮಾನ್ಯ. ಆದರೆ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಯೊಂದು ತನ್ನ ಕೆಲಸಗಾರರಿಗೆ ಕೆಲಸದ ಅವಧಿಯಲ್ಲಿ 30 ನಿಮಿಷ ನಿದ್ರೆ ಮಾಡುವ ಅವಕಾಶ ಮಾಡಿಕೊಟ್ಟಿದೆ.

ರಾಜಧಾನಿಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮ ಘೋಷಿಸಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಈ ವಿನೂತನ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ. ಕೋರಮಂಗಲ ಮೂಲದ ಸ್ಟಾರ್ಟ್ ಅಪ್ ವೇಕ್ ಫಿಟ್ ಸಲ್ಯೂಷನ್ ಕರ್ತವ್ಯದ ಅವಧಿಯಲ್ಲಿ ಉದ್ಯೋಗಿಗಳಿಗೆ 30 ನಿಮಿಷದ ನಿದ್ರಾ ವಿರಾಮ ನೀಡಿ ಅಧಿಕೃತ ಘೋಷಣೆ ಮಾಡಿದೆ.

ವೇಕ್ ಫಿಟ್ ಸಲ್ಯೂಷನ್‍ನ ಸಹಸಂಸ್ಥಾಪಕ ಚೈತನ್ಯ ರಾಮಲಿಂಗೇ ಗೌಡ ಇತ್ತೀಚೆಗೆ ಸಹೋದ್ಯೋಗಿಗಳಿಗೆ ಇಮೇಲ್ ಮಾಡಿ ಮಧ್ಯಾಹ್ನ 2ರಿಂದ 2.30ರ ನಡುವೆ ಉದ್ಯೋಗಿಗಳು ನಿದ್ದೆ ಮಾಡಬಹುದು ಎಂದು ತಿಳಿಸಿದ್ದರು.

ಕಳೆದ ಆರು ವರ್ಷಗಳಿಂದ ವ್ಯವಹಾರ ಎಂಬ ನಿದ್ರೆಯಲ್ಲಿ ಮಗ್ನರಾಗಿದ್ದೆವು. ಆದರೆ ಉದ್ಯೋಗಿಗಳ ವಿಶ್ರಾಂತಿಗೆ ನ್ಯಾಯ ಸಲ್ಲಿಸಲು ನಾವು ವಿಫಲರಾಗಿದ್ದೆವು. ಹೀಗಾಗಿ ನಮ್ಮ ಸಂಸ್ಥೆ ವತಿಯಿಂದ ಉದ್ಯೋಗಿಗಳಿಗೆ ಕೊಂಚ ವಿಶ್ರಾಂತಿ ನೀಡಲು ಮುಂದಾಗಿದ್ದೇವೆ. ಚಿಕ್ಕ ನಿದ್ದೆಯನ್ನು ಕೂಡ ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ನು ಮುಂದೆ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ.