ಬೆಂಗಳೂರು ವಿವಿಯಲ್ಲಿ ದುರಾಡಳಿತ : ಸಿಂಡಿಕೇಟ್ ಸದಸ್ಯ ಡಾ.ಸುಧಾಕರ್ ಆರೋಪ

Social Share

ಬೆಂಗಳೂರು,ಫೆ.28- ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಆರ್.ವೇಣುಗೋಪಾಲ್ ಮತ್ತು ಕುಲಸಚಿವರಾದ ಸಿಂಡಿಕೇಟ್ ಸದಸ್ಯ ಕಾರ್ಯದರ್ಶಿ ಕೊಟ್ರೇಶಿ ಅವರು ದುರಾಡಳಿತದಲ್ಲಿ ತೊಡಗಿದ್ದಾರೆ ಎಂದು ಸಿಂಡಿಕೇಟ್ ಸದಸ್ಯ ಡಾ.ಸುಧಾಕರ.ಎಚ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.18ರಂದು ವಿಶೇಷ ಸಿಂಡಿಕೇಟ್ ಸಭೆ ಜರುಗಿಸಿದ್ದು, ರಾಜ್ಯಪಾಲರು ಮತ್ತು ಸರ್ಕಾರ ನೇಮಿಸಿದ 8 ಸದಸ್ಯರು ಭಾಗವಹಿಸದೆ ಇದ್ದರೂ ಕುಲಪತಿಗಳು ವಿಶೇಷ ಸಿಂಡಿಕೇಟ್ ಸಭೆ ನಡೆಸಿ ತಿರ್ಮಾನಗಳನ್ನು ತೆಗೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಈ ಕುಲಪತಿಗಳು ಮತ್ತು ಕುಲಸಚಿವರು ಮಾತ್ರ ಮೊದಲ ಬಾರಿಗೆ ಈ ರೀತಿಯ ಕೆಟ್ಟ ದುರಾಡಳಿತದ ಬುನಾದಿ ಹಾಕಿದ್ದಾರೆ ಎಂದು ದೂರಿದರು. ಕಾನೂನುಬಾಹಿರ ಸಭೆ ನಡೆಸಿ ವಿಶ್ವವಿದ್ಯಾನಿಲಯದ ನಿಯಮಗಳ ಉಲ್ಲಂಘನೆಯನ್ನು ಮಾಡಿದ್ದಾರೆ. ಆದ್ದರಿಂದ ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಊರ್ಜಿತವಲ್ಲ ಎಂದು ಅವರು ಗುಡುಗಿದರು.
ಕುಲಪತಿಗಳು ಮತ್ತು ಕುಲಸಚಿವರು ಸಿಂಡಿಕೇಟ್ ನಲ್ಲಿ ಚರ್ಚಿಸಿದ ವಿಷಯಗಳ ಗೋಪ್ಯತೆಯನ್ನುಕಾಪಾಡದೆ ಬೋಧಕೇತರ ನೌಕರರ ಸಂಘದ ಸಿಬ್ಬಂದಿಗೆ ತಿಳಿಸಿ, ಕಾನೂನು ಉಲ್ಲಂಘನೆ ಮಾಡಿ ವಿಶ್ವವಿದ್ಯಾಲಯದ ಶಾಂತಿಯನ್ನು ಕೆದಡಿ, ಅಶಾಂತಿ ವಾತಾವರಣ ಸೃಷ್ಟಿಸಲು ಪರೋಕ್ಷವಾಗಿ ಕಾರಣರಾಗಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಅಶಾಂತಿ ನಿರ್ಮಾಣವಾಗುವುದಕ್ಕೆ ಕುಮ್ಮಕ್ಕು ನೀಡುತ್ತಿರುವ ಕುಲಪತಿಗಳು ಮತ್ತು ಕುಲಸಚಿವರ ಮೇಲೆ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗೋಪಿನಾಥ್, ಪ್ರೊ..ಟಿ.ವಿ.ರಾಜು, ಉದಯಕುಮಾರ್, ಡಾಕ್ಟರ್ ಗೋವಿಂದರಾಜು, ಮುಂತಾದವರು ಉಪಸ್ಥಿತರಿದ್ದರು.

Articles You Might Like

Share This Article