‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ಶೇ.58ರಷ್ಟು ಅನುದಾನ ಮಾಧ್ಯಮಗಳ ಪ್ರಚಾರಕ್ಕೆ ಬಳಕೆ

Social Share

ನವದೆಹಲಿ,ಫೆ.2-ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷಿ ಯೋಜನೆಯಾದ ಬೇಟಿ ಬಚಾವೋ, ಬೇಟಿ ಪಡಾವೋ ಅಡಿ 2014ರಿಂದ ಈವರೆಗೆ 683.05 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಇದರಲ್ಲಿ ಮಾಧ್ಯಮಗಳ ಪ್ರಚಾರಕ್ಕಾಗಿಯೇ 401 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಸದಸ್ಯ ಡೆರೆಕ್ ಓ ಬ್ರೆಹನ್ ಅವರು ಪ್ರಶ್ನೆ ಕೇಳಿ ಬೇಟಿ ಬಚಾವೋ, ಬೇಟಿ ಪಡಾವೊ ಯೋಜನೆಯಲ್ಲಿನ ಶೇ.78.1ರಷ್ಟು ಅನುದಾನವನ್ನು ಮಾಧ್ಯಮಗಳ ಪ್ರಚಾರಕ್ಕಾಗಿಯೆ ಬಳಸಲಾಗಿದೆಯೇ ಎಂದು ಸಂಶಯ ವ್ಯಕ್ತಪಡಿಸಿದರು.ಇದಕ್ಕೆ ಉತ್ತರ ನೀಡಿದ ಸಚಿವರು, ಶೇ.58ರಷ್ಟು ಅನುದಾನವನ್ನು ಮಾಧ್ಯಮಗಳ ಪ್ರಚಾರಕ್ಕೆ ಖರ್ಚು ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮಾಧ್ಯಮಗಳ ಪ್ರಚಾರದ ಖರ್ಚು ಗಣನೀಯವಾಗಿ ತಗ್ಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
2014-15ರಲ್ಲಿ 50 ಕೋಟಿ ರೂ.ಗಳನ್ನು ನಿಗದಿ ಮಾಡಿ 34.84 ಕೋಟಿ ಖರ್ಚು ಮಾಡಲಾಗಿದೆ. ಇದರಲ್ಲಿ 21.46 ಕೋಟಿ ರೂ.ಗಳನ್ನು ಮಾಧ್ಯಮಗಳ ಜಾಹಿರಾತಿಗೆ, 13.38 ಕೋಟಿ ರೂ.ಗಳನ್ನು ಬಹುವಲಯ ಮಧ್ಯಸ್ಥಿಕೆ ವೆಚ್ಚ ಮಾಡಲಾಗಿದೆ ಎಂದಿದ್ದಾರೆ.
2015-16ನೇ ಸಾಲಿನಲ್ಲಿ 75 ಕೋಟಿ ಪೈಕಿ 59.37 ಕೋಟಿ ಖರ್ಚು ಮಾಡಲಾಗಿದ್ದು, ಮಾಧ್ಯಮಗಳಿಗೆ 21.01 ಕೋಟಿ ರೂ. ನೀಡಲಾಗಿದೆ. ಸಾಂಸ್ಥಿಕ ಯೋಜನೆಗಳಿಗಾಗಿ 38.36 ಕೋಟಿ ಬಳಕೆ ಮಾಡಲಾಗಿದೆ.2016-17ರಲ್ಲಿ 43 ಕೋಟಿ ರೂ.ಗಳ ಪೈಕಿ 28.66 ಕೋಟಿ ಖರ್ಚಾಗಿದ್ದು, ಮಾಧ್ಯಮಗಳಿಗೆ 25.84 ಕೋಟಿ ಖರ್ಚಾಗಿದೆ. ಸಾಂಸ್ಥಿಕ ಯೋಜನೆಗೆ 2.42 ವ್ಯಯವಾಗಿದೆ.
2017-18ರಲ್ಲಿ 200 ಕೋಟಿ ರೂ. ಪೈಕಿ 160.10 ಕೋಟಿ ಖರ್ಚು ಮಾಡಿದ್ದು, 135.92 ಕೋಟಿ ಮಾಧ್ಯಮಗಳಿಗೆ ಸಾಂಸ್ಥಿಕ ಯೋಜನೆಗೆ 33.18 ಕೋಟಿ ಬಳಕೆ ಮಾಡಲಾಗಿದೆ. 2018-19ರಲ್ಲಿ 280 ಕೋಟಿ ನಿಗದಿ ಮಾಡಿ 244.73 ಕೋಟಿ ವೆಚ್ಚ ಮಾಡಲಾಗಿದೆ. ಮಾಧ್ಯಮಗಳಿಗೆ 164.04 ಕೋಟಿ, ಸಾಂಸ್ಥಿಕ ಯೋಜನೆಗೆ 80.69 ಕೋಟಿ ರೂ. ಖರ್ಚು ಮಾಡಲಾಗಿದೆ.
2019-20ರಲ್ಲಿ 200 ಕೋಟಿ ಪೈಕಿ 85.78 ಕೋಟಿ ಖರ್ಚು ಮಾಡಿದ್ದು, ಮಾಧ್ಯಮಗಳಿಗೆ 25.75 ಕೋಟಿ, ಸಾಂಸ್ಥಿಕ ಯೋಜನೆಗೆ 60.03 ಕೋಟಿ , 2020-21ರಲ್ಲಿ 100 ಕೋಟಿ ಪೈಕಿ 60.57 ಕೋಟಿ ಖರ್ಚು ಮಾಡಲಾಗಿದ್ದು, ಮಾಧ್ಯಮಗಳಿಗೆ 7.02 ಕೋಟಿ, ಸಾಂಸ್ಥಿಕ ಯೋಜನೆಗಾ 53.55 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಯೋಜನೆಯ ಫಲಶೃತಿಗಳ ಬಗ್ಗೆಯೂ ಸ್ಮೃತಿ ಇರಾನಿಯೂ ವಿವರಣೆ ನೀಡಿದ್ದು, ಲಿಂಗಾನುಪಾತ ಸುಧಾರಣೆಯಾಗಿದೆ, ಆಸ್ಪತ್ರೆಗಳ ಹೆರಿಗೆಯ ಪ್ರಮಾಣ ಹೆಚ್ಚಾಗಿದೆ, ಹೆಣ್ಣು ಮಕ್ಕಳ ಶಿಕ್ಷಣದ ಸುಧಾರಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೇಶದ 405ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಯಲ್ಲಿದ್ದು, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಮೇಲುಸ್ತುವಾರಿಗೆ ಜಿಲ್ಲಾಮಟ್ಟದಿಂದ ಕೇಂದ್ರ ಮಟ್ಟದವರೆಗೂ ವಿವಿಧ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

Articles You Might Like

Share This Article