ವರ್ಷಾಂತ್ಯಕ್ಕೆ ಶಾಲಾ ಪಠ್ಯದಲ್ಲಿ ಭಗದ್ಗೀತೆ ಬೋಧನೆ ಸೇರ್ಪಡೆ : ಸಚಿವ ನಾಗೇಶ್

Social Share

ಬೆಂಗಳೂರು,ಸೆ.19- ಮುಂದಿನ ಡಿಸೆಂಬರ್‍ನಿಂದ ಶಾಲಾ ಪಠ್ಯ ಕ್ರಮದಲ್ಲಿ ನೈತಿಕ ಶಿಕ್ಷಣವನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಅದರಲ್ಲಿ ಭಗದ್ಗೀತೆ ಬೋಧನೆಯನ್ನು ಸೇರ್ಪಡೆಗೊಳಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಮತ್ತು ಎನ್.ರವಿಕುಮಾರ್ ಅವರ ಜಂಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪ್ರಾಣೇಶ್ ಅವರು ಈ ಹಿಂದೆ ನಾವು ಇದೇ ಪ್ರಶ್ನೆ ಕೇಳಿದಾಗ ಭಗವದ್ಗೀತೆ ಬೋಧನೆಗೆ ಕ್ರಮ ಕೈಗೊಳ್ಳಲಾಗುವುದು. ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ತಜ್ಞರ ಸಮಿತಿ ರಚಿಸುತ್ತೇವೆ. ಪಠ್ಯ ರೂಪಿಸಲು ಸಮಿತಿ ರಚಿಸುತ್ತೇವೆ ಎಂದು ಹೇಳಿದರು.

ಈಗ ನೀಡಿರುವ ಲಿಖಿತ ಉತ್ತರದಲ್ಲಿ ಆ ರೀತಿಯ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಗವದ್ಗೀತೆ ಬೋಧನೆಗೆ ಯಾರ ವಿರೋಧವೂ ಇಲ್ಲ. ಆದರೂ ಸರ್ಕಾರ ಏಕೆ ಈ ರೀತಿಯ ಉತ್ತರ ನೀಡುತ್ತಿದೆ. ಯಾವುದಾದರೂ ಮುಜುಗರ ಇದೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!

ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಪ್ರಸ್ತುತ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದೇನೆ. ಆದರೆ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ ಮಾಡಲಾಗುತ್ತದೆ. ಅದಕ್ಕಾಗಿಯೇ ಒಂದು ಸಮಿತಿ ರಚಿಸಿದ್ದೇವೆ. ಅದರ ಶಿಫಾರಸ್ಸು ಆಧರಿಸಿ ಡಿಸೆಂಬರ್‍ನಿಂದ ನೈತಿಕ ಶಿಕ್ಷಣದ ಪಠ್ಯಕ್ರಮದಲ್ಲಿ ಎಲ್ಲರ ಬೇಡಿಕೆಯಂತೆ ಭಗವದ್ಗೀತೆ ಸೇರಿಸಲಾಗುವುದು ಎಂದರು.

ಚಿಕ್ಕಮಗಳೂರಿನ ಬಾಬಾಬುಡನಗಿರಿ ಕುರಿತು ಶಾಲಾ ಪಠ್ಯಕ್ರಮದಲ್ಲಿ ಪ್ರಸ್ತಾಪವಾಗಿದೆ. ಅದನ್ನು ಇನಾಂ ದತ್ತಾತ್ರೇಯ ಪೀಠ ಎಂದು ಪರಿಷ್ಕರಣೆ ಮಾಡುವಂತೆ ಸದಸ್ಯರು ಒತ್ತಾಯಿಸಿದಾಗ ಸ್ಪಷ್ಟನೆ ನೀಡಿದ ಸಚಿವರು, ಈಗಾಗಲೇ ಪಠ್ಯಕ್ರಮದಲ್ಲಿ ಕಂಡುಬಂದಿದ್ದ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತಪ್ಪುಗಳನ್ನು ಸರಿಪಡಿಸುತ್ತೇವೆ ಎಂದರು.

Articles You Might Like

Share This Article