ಭಗತ್ ಸಿಂಗ್ ಪಾಠ ಕೈಬಿಟ್ಟಿಲ್ಲ : ಪಠ್ಯಪುಸ್ತಕ ಸಂಘ ಸ್ಪಷ್ಟನೆ

ಬೆಂಗಳೂರು, ಮೇ 17- ಪ್ರಸಕ್ತ ಶೈಕ್ಷಣಿಕ ವರ್ಷದ 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಿಂದ ಸ್ವಾತಂತ್ರ್ಯ ಸೇನಾನಿ ಭಗತ್‍ಸಿಂಗ್ ಗದ್ಯಪಾಠವನ್ನು ಕೈಬಿಟ್ಟಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯಪುಸ್ತಕ ಸಂಘ ಸ್ಪಷ್ಟಪಡಿಸಿದೆ.

10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು ಪ್ರಸ್ತುತ ಮುದ್ರಣ ಹಂತದಲ್ಲಿದೆ. ಕೆಲವು ಮಾಧ್ಯಮಗಳಲ್ಲಿ 10ನೇ ತರಗತಿಯ ಪ್ರಥಮ ಭಾಷೆ ಪಠ್ಯದಲ್ಲಿದ್ದ ಭಗತ್‍ಸಿಂಗ್ ಅವರ ಗದ್ಯವನ್ನು ಕೈಬಿಟ್ಟು ಹೆಡಗೆವಾರ್ ಅವರ ಗದ್ಯವನ್ನು ಸೇರಿಸಲಾಗಿದೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಈ ಸ್ಪಷ್ಟನೆ ನೀಡಿದ್ದಾರೆ.

10ನೇ ತರಗತಿ ಕನ್ನಡ ಭಾಷೆ ಪಠ್ಯದಿಂದ ಭಗತ್‍ಸಿಂಗ್ ಗದ್ಯವನ್ನು ತೆಗೆದು ಹಾಕಿಲ್ಲ. ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕವು ಮುದ್ರಣ ಹಂತದಲ್ಲಿದೆ ಎಂದು ಕರ್ನಾಟಕ ಪಠ್ಯಪುಸ್ತಕ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

ಸಮಾಜವಿಜ್ಞಾನ ಹಾಗೂ ಭಾಷಾ ವಿಜ್ಞಾನಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಹಾಗೂ 1ರಿಂದ 10ನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.