ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲು ಸರ್ಕಾರ ಚಿಂತನೆ

Social Share

ಬೆಂಗಳೂರು, ಆ.3- ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಇನ್ನು ಕಿಚ್ಚು ಹಸಿಯಾಗಿರುವಾಗಲೇ ಸರ್ಕಾರ ಮತ್ತೊಂದು ವಿವಾದಕ್ಕೆ ಕೈ ಹಾಕುವ ಲಕ್ಷಣಗಳಿವೆ. ಈಗಾಗಲೇ ಗುಜರಾತ್‍ನಲ್ಲಿ 6ನೇ ತರಗತಿಯಿಂದ ಪಿಯುಸಿ ಹಂತದವರೆಗೆ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗಿದೆ. ಈಗ ಕರ್ನಾಟಕದಲ್ಲಿ ಇದೇ ಮಾದರಿಯನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಆರನೇ ತರಗತಿಯಿಂದ ಪಿಯುಸಿವರೆಗೆ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ಭಗವದ್ಗೀತೆ, ರಾಮಾಯಣ, ಮಹಾಭಾರತದಲ್ಲಿರುವ ಕೆಲವು ಪ್ರಮುಖ ಅಂಶಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು, ಈ ತಿಂಗಳ ಅಂತ್ಯಕ್ಕೆ ರೂಪುರೇಷೆ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಗುಜರಾತ್ ರಾಜ್ಯಕ್ಕೆ ಶಿಕ್ಷಣ ಇಲಾಖೆಯ ಕೆಲವು ಹಿರಿಯ ಅಕಾರಿಗಳ ತಂಡವನ್ನು ಕಳುಹಿಸಿದ್ದು ಅಲ್ಲಿ ಯಾವ ರೀತಿ ಅಳವಡಿಸಲಾಗಿದೆ. ಬೋಧನಾ ರೀತಿ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿ ರಾಜ್ಯದಲ್ಲೂ ಅಳವಡಿಸಲು ಮುಂದಾಗಬೇಕೆಂದು ಖುದ್ದು ನಾಗೇಶ್ ಅವರೇ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗುಜರಾತ್‍ನ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತ ಸೇರಿಸಲಾಗಿದ್ದು ರಾಜ್ಯದಲ್ಲಿಯೂ ಶಾಲಾ ಪಠ್ಯ ಭಗವದ್ಗೀತೆ ಸೇರ್ಪಡೆ ಮಾಡಿ ಭೋಧನೆ ಸಂಬಂಧ ಈಗಾಗಲೇ ಸಮಿತಿಯನ್ನು ರಚನೆ ಮಾಡಲಾಗಿದೆ. ನೈತಿಕ ಪಾಠ ಅಡಿಯಲ್ಲಿ ಭಗವದ್ಗೀತೆ ಪಠ್ಯ ಜಾರಿಗೆ ಚಿಂತನೆ ನಡೆಸಿರುವ ಇಲಾಖೆಯು ಸದ್ಯ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಸಲು ಮುಂದಾಗಿದೆ.

ಮಕ್ಕಳಿಗೆ ಭಗವದ್ಗೀತೆ, ರಾಮಯಣ ಮಹಾಭಾರತದ ತತ್ವಗಳು ಮತ್ತು ಮೌಲ್ಯಗಳನ್ನು ಕಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಸಕಲ ಹಿಂದುಗಳ ಧರ್ಮಗ್ರಂಥ ಎಂದೇ ಹೇಳಲಾಗುವ ಭಗವದ್ಗೀತೆಯನ್ನು ಗುಜರಾತ್‍ನ ಶಾಲೆಗಳಲ್ಲಿ ಪಠ್ಯಕ್ರಮವಾಗಿ ಸೇರಿ ಸಲಾಗುವುದು ಎಂದು ಗುಜರಾತ್‍ನ ಶಿಕ್ಷಣ ಸಚಿವ ಜಿತು ವಾಘನಿ ಘೋಷಣೆ ಮಾಡಿದ್ದಾರೆ.

ಗುಜರಾತ್ ಶಾಲೆಯ 6ರಿಂದ 12ನೇ ತರಗತಿಯ ಮಕ್ಕಳು ಪಠ್ಯಕ್ರಮದ ಭಾಗವಾಗಿ ಶ್ರೀಮದ್ ಭಗವದ್ಗೀತೆಯ ಸಾರವನ್ನು ಕಲಿಯಲಿದ್ದಾರೆ ಎಂದು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ ಹೊಸ ಶಿಕ್ಷಣ ನೀತಿಯಲ್ಲಿ ತಿಳಿಸಲಾಗಿದೆ. ಭಗವದ್ಗೀತೆಯ ತತ್ವಗಳು ಹಾಗೂ ಮೌಲ್ಯಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯ ಮಕ್ಕಳಿಗೆ ಕಲಿಸಲಾಗುತ್ತದೆ.
ಶಾಲಾ ಮಕ್ಕಳಿಗೆ ಗೀತಾ ಜ್ಞಾನ ಮತ್ತು ಅದರ ಮೌಲ್ಯಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ಗೀತಾ ಕುರಿತು ಭಾಷಣ ಸ್ಪರ್ಧೆ, ಶ್ಲೋಕ ಗಾನ, ಸಾಹಿತ್ಯ ಸ್ಪರ್ಧೆಯನ್ನೂ ಸಹ ಆಯೋಜಿಸಿದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಶಾಲೆ ಮತ್ತು ಕಾಲೇಜು ಪಠ್ಯಕ್ರಮದಿಂದ ತಾಂತ್ರಿಕ ಶಿಕ್ಷಣದವರೆಗೆ, ಭಗವದ್ಗೀತೆಯನ್ನು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಪಠ್ಯಕ್ರಮಗಳಲ್ಲಿ ಸೇರಿಸಿಕೊಳ್ಳಬಹುದು ಎಂದು ಹೇಳಿದ್ದರು.

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಟ್ರೈನಿಂಗ್ ತನ್ನ 11 ಮತ್ತು 12 ನೇ ತರಗತಿಯ ಸಂಸ್ಕೃತ ಪಠ್ಯಪುಸ್ತಕಗಳಲ್ಲಿ ಶ್ರೀಮದ್ ಭಗವತ್ ಗೀತೆಗೆ ಸಂಬಂಧಿಸಿದ ವಿಷಯಗಳನ್ನು ಈಗಾಗಲೇ ಸೇರಿಸಲಾಗಿದೆ ಎಂದು ತಿಳಿಸಿದ್ದರು.
ಇನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯದ ಪಠ್ಯಕ್ರಮಗಳಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

Articles You Might Like

Share This Article