ಭಾರತ್ ಬಂದ್ : ಇಂದಿರಾ ಕ್ಯಾಂಟೀನ್, ಮೆಟ್ರೋ ಓಪನ್- ಅಂಗಡಿ, ಮಾಲ್, ಬಸ್ ಬಂದ್

Bharath-Bhandh
ಬೆಂಗಳೂರು, ಸೆ.10- ಮೋದಿ ಮುಖವಾಡ ತೊಟ್ಟ ವ್ಯಕ್ತಿಯನ್ನು ಬೈಕ್ ಮೇಲೆ ಕೂರಿಸಿ ಆತನನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸುವುದು, ಕಾರಿಗೆ ಹಗ್ಗ ಕಟ್ಟಿ ಎಳೆಯುವುದು ಹಾಗೂ ಸಿಲಿಂಡರ್‍ಗೆ ತಿರುಪತಿ ನಾಮ ಬಳಿಯುವ ಮೂಲಕ ನಗರದಲ್ಲಿ ವಿನೂತನವಾಗಿವಾಗಿ ಭಾರತ್ ಬಂದ್ ಆಚರಿಸಲಾಯಿತು.
ಯುವ ಕಾಂಗ್ರೆಸ್ ಕಾರ್ಯಕರ್ತರು ಮೌರ್ಯ ಸರ್ಕಲ್ ಬಳಿ ಮೋದಿ ಮುಖವಾಡ ಹಾಕಿದ ವ್ಯಕ್ತಿಯನ್ನು ಬೈಕ್ ಮೇಲೆ ಕೂರಿಸಿ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ತೈಲಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಿಲ್ಲದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಣಕು ಪ್ರದರ್ಶನ ನಡೆಸಿದರು.
ಟೌನ್‍ಹಾಲ್ ಸಮೀಪ ಕನ್ನಡಪರ ಹೋರಾಟಗಾರರು ಹಾಗೂ ಚಾಲಕರು ಕಾರುಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರೆ, ಇನ್ನೂ ಕೆಲವರು ಗ್ಯಾಸ್ ಸಿಲಿಂಡರ್‍ಗಳಿಗೆ ತಿರುಪತಿ ನಾಮ ಬಳಿದು ತಾವೂ ನಾಮ ಹಾಕಿಕೊಂಡು ಪ್ರತಿಭಟನೆ ನಡೆಸಿದರು.

ಬಸ್ ಸಂಚಾರ ಬಂದ್: ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಬಸ್ ಸಂಚಾರ ಸ್ತಬ್ಧಗೊಂಡಿತ್ತು. ಸರ್ಕಾರಿ ಹಾಗೂ ಖಾಸಗಿ ಬಸ್ ರಸ್ತೆಗಿಳಿಯದ ಕಾರಣ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.  ಬಂದ್ ಅರಿವಿಲ್ಲದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದ್ದರಿಂದ ಪ್ರಯಾಣಿಕರು ಆಟೋ ಮತ್ತು ಕ್ಯಾಬ್‍ಗಳಿಗೆ ಮೊರೆ ಹೋಗುವಂತಾಯಿತು.  ಚಿತ್ರಮಂದಿರ-ಮಾಲ್-ಮಾರುಕಟ್ಟೆಗಳು ಬಿಕೋ: ನಗರದ ಬಹುತೇಕ ಮಾಲ್‍ಗಳು, ಚಿತ್ರಮಂದಿರಗಳು ಹಾಗೂ ವಾಣಿಜ್ಯ ಮಳಿಗೆ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಬಹುತೇಕ ಚಿತ್ರಮಂದಿರ, ಮಾಲ್‍ಗಳು ಹಾಗೂ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು.

ಬೆಳಗ್ಗೆ 6 ರಿಂದ ಸಂಜೆ 6ರ ವರೆಗೂ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಲಾಗಿದೆ ಎಂದು ಮಾಲ್‍ಗಳ ಮುಂಭಾಗ ನಾಮಫಲಕ ಹಾಕುವ ಮೂಲಕ ಮಾಲೀಕರು ಭಾರತ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.  ಎಪಿಎಂಸಿ ಮಾರುಕಟ್ಟೆ, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಮೆಜೆಸ್ಟಿಕ್, ಯಲಹಂಕ, ಚಿಕ್ಕಪೇಟೆ ಸೇರಿದಂತೆ ಬಹುತೇಕ ಮಾರುಕಟ್ಟೆಗಳಲ್ಲಿ ಜನಸಂದಣಿ ಇಲ್ಲದ ಪರಿಣಾಮ ಕೂಲಿ ಕೆಲಸಗಾರರು ಕ್ರಿಕೆಟ್ ಆಡುವ ಮೂಲಕ ಕಾಲ ಕಳೆದರು.  ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಸಿಟಿ ಸಿವಿಲ್ ಕೋರ್ಟ್, ಹೈಕೋರ್ಟ್, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಕಟ್ಟಡದಲ್ಲಿ ಜನಸಂಖ್ಯೆ ವಿರಳವಾಗಿತ್ತು. ಅವಿನ್ಯೂ ರಸ್ತೆ, ಚಿಕ್ಕಪೇಟೆ, ಕಾಟನ್‍ಪೇಟೆ ಮುಂತಾದ ಕಡೆ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬಂದ್‍ಗೆ ಬೆಂಬಲ ಘೋಷಿಸಿದರು.

ಮೆಟ್ರೋ ಮಾಮೂಲು: ಬಸ್ ಸಂಚಾರ ಸ್ತಬ್ಧಗೊಂಡಿದ್ದರೂ ಮೆಟ್ರೋ ರೈಲು ಸಂಚಾರ ಮಾಮೂಲಾಗಿತ್ತು. ಬಂದ್ ನಡುವೆಯೂ ಬೆಳಗ್ಗೆಯಿಂದಲೇ ರೈಲು ಸಂಚಾರ ಆರಂಭಗೊಂಡಿತ್ತು.  ಆದರೆ, ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆ ಬಿಡದ ಪರಿಣಾಮ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ, ಕೆಲ ಪ್ರತಿಭಟನಾಕಾರರು ಮೆಟ್ರೋ ರೈಲು ಸಂಚಾರ ವಿರೋಧಿಸಿ ಮಂತ್ರಿಮಾಲ್‍ನ ಮೆಟ್ರೋ ನಿಲ್ದಾಣ ಸಮೀಪ ಪ್ರತಿಭಟನೆ ನಡೆಸಿದರು.

ವಿರಳ ನೌಕರರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರೂ ನೌಕರರು ಸಕಾಲಕ್ಕೆ ಕಚೇರಿಗೆ ಆಗಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಧಾನಸೌಧ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದವು.

ಇಂದಿರಾ ಕ್ಯಾಂಟಿನ್‍ಗಳಿಗೆ ಭರ್ಜರಿ ವ್ಯಾಪಾರ: ಬಹುತೇಕ ಹೋಟೆಲ್‍ಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಇಂದು ಇಂದಿರಾ ಕ್ಯಾಂಟಿನ್‍ಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.  ಬೆಳಗ್ಗೆಯಿಂದಲೇ ವ್ಯಾಪಾರ ಆರಂಭಿಸಿದ ಇಂದಿರಾ ಕ್ಯಾಂಟಿನ್‍ಗಳ ಮುಂಭಾಗ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ತಿಂಡಿ ಸೇವಿಸುತ್ತಿದ್ದ ದೃಶ್ಯ ಕಂಡುಬಂದವು.  ಇಂದಿರಾ ಕ್ಯಾಂಟಿನ್ ಆರಂಭವಾದ ದಿನದಿಂದ ಇಲ್ಲಿಯವರೆಗೂ ಈ ಪ್ರಮಾಣದ ವ್ಯಾಪಾರ ಆಗಿರಲಿಲ್ಲ ಎನ್ನುತ್ತಾರೆ ಕ್ಯಾಂಟಿನ್ ಸಿಬ್ಬಂದಿಗಳು.  ಒಟ್ಟಾರೆ ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಖಂಡಿಸಿ ಇಂದು ಕರೆಯಲಾಗಿದ್ದ ಭಾರತ್ ಬಂದ್‍ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂತು.

Untitled-2 copy Untitled-3 copy Untitled-4 copy WhatsApp Image 2018-09-10 at 12.48.50 PM(1) WhatsApp Image 2018-09-10 at 12.48.50 PM

DSC_5430 RKP_1916 RKP_1917

IMG-20180910-WA0006 IMG-20180910-WA0015 IMG-20180910-WA0018 IMG-20180910-WA0029 IMG-20180910-WA0036 IMG-20180910-WA0040

IMG-20180910-WA0124

IMG-20180910-WA0090

WhatsApp Image 2018-09-10 at 9.31.30 AM WhatsApp Image 2018-09-10 at 9.31.31 AM WhatsApp Image 2018-09-10 at 10.57.43 AM WhatsApp Image 2018-09-10 at 11.37.44 AM

 

Sri Raghav

Admin