ನವದೆಹಲಿ,ಜ.30- ಕಳೆದ 134 ದಿನಗಳಿಂದ ನಡೆದಿದ್ದ ಭಾರತ ಜೋಡೋ ಯಾತ್ರೆ ಕೊನೆಯ ದಿನವಾದ ಇಂದು ಶ್ರೀನಗರದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಇದಕ್ಕೂ ಮುನ್ನಾ ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್‍ಗಾಂಧಿ ರಾಷ್ಟ್ರಧ್ವಜವನ್ನು ಹಾರಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿ ವಾದ್ರಾ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಸ್ಥಳೀಯ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು. ಧ್ವಜಾ ರೋಹಣ, ಸಮಾರೋಪ ಸೇರಿದಂತೆ ಶ್ರೀನಗರದಲ್ಲಿ ಕಾಂಗ್ರೆಸ್ ನಾಯಕರ ಕಾರ್ಯಕ್ರಮಗಳಿಗೆ ವ್ಯಾಪಕ ಭದ್ರತೆ ಒದಗಿಸಲಾಗಿತ್ತು. ಮಂಜು ತುಂತುರು ನಿರಂತರವಾಗಿ ಸುರಿಯುತ್ತಿತ್ತು. ಕೊರೆಯುವ ಶೀಥ ವಾತಾವರಣದಲ್ಲಿ ಕಾಂಗ್ರೆಸ್ ನಾಯಕರು ಕಣಿವೆ ರಾಜ್ಯದಲ್ಲಿ ಪಕ್ಷದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
ಮುಂದುವರೆದ ಅದಾನಿ – ಹಿಡನ್‍ಬರ್ಗ್ ಜುಗಲ್ ಬಂದಿ
ಇದೇ ತಿಂಗಳ 20ರಂದು ತಿಹಾಸಿಕ ಭಾರತ್ ಜೋಡೋ ಯಾತ್ರೆ ಕಠುವಾ ಜಿಲ್ಲೆಯಿಂದ ಜಮ್ಮುವಿಗೆ ಕಾಲಿಟ್ಟಿತ್ತು. 10 ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಸಂಚರಿಸಿದೆ. ಈ ನಡುವೆ ಭದ್ರತೆಯ ಲೋಪ ಕಂಡು ಬಂದು ಒಂದು ದಿನದ ಯಾತ್ರೆಯನ್ನು ಅಮಾನತುಗೊಳಿಸಲಾಗಿತ್ತು. ನಂತರ ಬಿಗಿ ಭದ್ರತೆಯಲ್ಲಿ ಯಾತ್ರೆ ಸರಾಗವಾಗಿ ಮುಂದುವರೆದಿದೆ.
ಬಿಜೆಪಿ ಆಡಳಿತ ಅವಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಹೆಚ್ಚಾಗಿದೆ. ಇದನ್ನು ಮರೆ ಮಾಚಲು ಬಿಜೆಪಿ ಕೋಮುದ್ವೇಷ ಹರಡಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ರಾಹುಲ್‍ಗಾಂಧಿ ಆರೋಪಿಸಿದರು.
ಬಿಜೆಪಿ ಸರ್ಕಾರ ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುತ್ತಿದೆ. ಸಂಸತ್‍ನಲ್ಲಿ ವಿರೋಧ ಪಕ್ಷಗಳ ನಾಯಕರು ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ. ಮಾಧ್ಯಮಗಳು ನಮ್ಮ ಅಭಿಪ್ರಾಯವನ್ನು ಪ್ರಸಾರ ಮಾಡಲು ಬಿಡದೆ ನಿರ್ಬಂಧಿಸಲಾಗುತ್ತಿದೆ ಎಂದು ರಾಹುಲ್‍ಗಾಂದಿ ಆರೋಪಿಸಿದರು.
ಕಳೆದ ವರ್ಷ ರಾಜಸ್ತಾನದ ಉದಯ್‍ಪುರ್‍ನಲ್ಲಿ ನಡೆದ ಎಐಸಿಸಿಯ ಚಿಂತನ್ ಶಿವರ್‍ನಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಯಿತು. ಅದರಂತೆ ಕಳೆದ ವರ್ಷದ ಸೆಪ್ಟಂಬರ್ 7ರಂದು ತಮಿಳುನಾಡಿನ ಪೆರಂಬೂರಿನಲ್ಲಿ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್‍ಗಾಂದಿ ಪುಣ್ಯಭೂಮಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಾಹುಲ್‍ಗಾಂಧಿ, ನಂತರ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದರು.
ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಹರ್ಯಾಣ, ಪಂಜಾಬ್, ಜಮ್ಮು ಕಾಶ್ಮೀರ ಸೇರಿ 14 ರಾಜ್ಯಗಳ 75 ಜಿಲ್ಲೆಗಳಲ್ಲಿ ಮೂರುವರೆ ಸಾವಿರ ಕಿಲೋ ಮೀಟರ್ ಯಾತ್ರೆ ಸಂಚರಿಸಿದೆ.
ದಾರಿಯುದ್ದಕ್ಕೂ 12 ಕಡೆ ಸಾರ್ವಜನಿಕ ಸಭೆಗಳನ್ನು ನಡೆಸಲಾಗಿದೆ. ನೂರಕ್ಕೂ ಹೆಚ್ಚು ಕಾರ್ನರ್ ಮೀಟಿಂಗ್ಸ್‍ಗಳನ್ನು ನಡೆಸಿದ್ದಾರೆ. 13 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಹಲವು ವರ್ಗಗಳ ಜೊತೆಯಲ್ಲಿ ರಾಹುಲ್‍ಗಾಂಸ ಸಂವಾದ ನಡೆಸಿದ್ದಾರೆ.
ಕೊನೆಯ ದಿನವಾದ ಇಂದು ಶ್ರೀನಗರದ ಶೇರ್-ಎ-ಕಾಶ್ಮೀರ್ ಸ್ಟೇಡಿಯಂನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು. ಅಮ್‍ಆದ್ಮಿ, ಭಾರತ ರಾಷ್ಟ್ರೀಯ ಸಮಿತಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 21ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಎಐಎಡಿಎಂಕೆ, ವೈಎಸ್‍ಆರ್ ಕಾಂಗ್ರೆಸ್, ಬಿಜೆಡಿ, ಎಐಎಂಎಐಎಂ, ಎಐಯುಡಿಎಫ್ ಪಕ್ಷಗಳಿಗೆ ಕಾಂಗ್ರೆಸ್ ಕಾಂಗ್ರೆಸ್ ಆಹ್ವಾನ ನೀಡಿಲ್ಲ.
ಸಿದ್ದರಾಮಯ್ಯ ಶ್ರೀನಗರ ಪ್ರವಾಸ ರದ್ದು
ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಹಾಗೂ ದೇಶದ ಜ್ವಲಂತ ಸಮಸ್ಯೆಗಳ ಕುರಿತು ಜನಪರ ಧ್ವನಿ ಎತ್ತಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಐತಿಹಾಸಿಕ ಭಾರತ ಜೋಡೋ ಯಾತ್ರೆ ಯಶಸ್ವಿಗೊಂಡಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಕಳೆದ ಐದು ತಿಂಗಳಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುದೀರ್ಘ ಹಾದಿಯಲ್ಲಿ ಹಲವು ಅಡೆತಡೆಗಳ ಹೊರತಾಗಿಯೂ ಸಾಗಿದ ಈ ಯಾತ್ರೆ ದೇಶದ ಇತಿಹಾಸದ ಪುಟ ಸೇರಿದ್ದು, ಹೊಸ ಮೈಲುಗಲ್ಲು ಸೃಷ್ಟಿಸಿದೆ. ವಿಭಿನ್ನ ಹವಾಮಾನಗಳ ವೈಪರಿತ್ಯ ಸವಾಲು, ರಾಜಕೀಯ ಎದುರಾಳಿಗಳ ಟೀಕೆ, ಷಡ್ಯಂತ್ರ, ಅಪಪ್ರಚಾರ ಸೇರಿದಂತೆ ಎಲ್ಲ ಅಡೆತಡೆಗಳನ್ನು ಮೀರಿ ಯಾತ್ರೆ ಗುರಿ ತಲುಪಿದೆ ಎಂದು ಪಕ್ಷ ಹೆಮ್ಮೆ ಪಟ್ಟುಕೊಂಡಿದೆ.
Bharat Jodo Yatra, Closing, Ceremony, Kashmir,