ಬೆಂಗಳೂರು, ಸೆ.29- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ನಾಳೆ ಕರ್ನಾಟಕ ಪ್ರವೇಶಿಸಲಿದೆ. ಸೆ.10ರಿಂದ ಹತ್ತು ದಿನಗಳ ಕಾಲ ಕೇರಳ ರಾಜ್ಯಾದ್ಯಂತ ಸಂಚರಿಸಿದ ಪಾದಯಾತ್ರೆ ಇಂದು ಅಲ್ಲಿನ ಕೊನೆಯ ಹಂತವನ್ನು ಪೂರ್ಣಗೊಳಿಸಲಿದೆ.
ಮಲಪುರಂ ಸಮೀಪದ ಚುಗುತರದ ಮಥೋಮ್ ಕಾಲೇಜಿನಿಂದ ಆರಂಭವಾಗುವ ಯಾತ್ರೆ ಮಧ್ಯಾಹ್ನದ ವೇಳೆಗೆ ವಜೈಕಡವು ಬಳಿಯ ಮಣಿ ಮೋಲಿಯ ಸಿಕೆಎಸ್ಎಚ್ ಶಿಕ್ಷಣ ಸಂಸ್ಥೆ ಬಳಿ ವಿಶ್ರಾಂತಿ ಪಡೆಯಲಿದೆ. ಬಳಿಕ ರಾಹುಲ್ ಗಾಂಧಿಯವರು ಕಾರಿನಲ್ಲಿ ತಮಿಳುನಾಡಿನ ಗುಂಡಮಾರು ಸರ್ಕಾರಿ ಕಾಲೇಜಿಗೆ ತೆರಳಲಿದ್ದಾರೆ.
ಅಲ್ಲಿಂದ ಆರಂಭಗೊಳ್ಳುವ ಯಾತ್ರೆ ಸಂಜೆ ಕರ್ನಾಟಕದ ಗುಂಡ್ಲುಪೇಟೆಗೆ ಆಗಮಿಸಲಿದೆ. ಬೆಳಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ರಾಜ್ಯದಲ್ಲಿ ಯಾತ್ರೆ ಆರಂಭಗೊಳ್ಳಲಿದೆ. ಕರ್ನಾಟಕದಲ್ಲಿ ಒಟ್ಟು 21 ದಿನಗಳ ಕಾಲ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಹಾದುಹೋಗಲಿದೆ.
ಹಲವಾರು ವಿಧಾನಸಭಾ ಕ್ಷೇತ್ರಗಳನ್ನು ಬಳಸಿ ನಡೆಯುವ ಈ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಭಾಗವಹಿಸುವ ನಿರೀಕ್ಷೆಯಿದೆ. ಆಯ್ದ ಪೂಜೆ, ವಿಜಯದಶಮಿ ಅಂಗವಾಗಿ ಅಕ್ಟೋಬರ್ 4 ಮತ್ತು 5ರಂದು ವಿಶ್ರಾಂತಿ ನೀಡಲಾಗುತ್ತಿದೆ. 13 ಮತ್ತು 18ನೇ ತಾರೀಖು ಯಾತ್ರೆಗೆ ಬ್ರೇಕ್ ದೊರೆಯಲಿದೆ.
19ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯುವ ಸಾಧ್ಯತೆ ಇದೆ. ಅಲ್ಲಿಂದ ಮತ್ತೆ ಆಂಧ್ರಪ್ರದೇಶದ ಮಾರ್ಗವಾಗಿ ಯಾತ್ರೆ ಮುಂದುವರೆಯಲಿದ್ದು, ಮಹಾರಾಷ್ಟ್ರದ ಮೂಲಕ ಕಾಶ್ಮೀರದತ್ತ ಹೆಜ್ಜೆ ಹಾಕಲಿದೆ. ಈ ಯಾತ್ರೆ ರಾಜ್ಯ ಕಾಂಗ್ರೆಸ್ನ ಪಾಲಿಗೆ ಶಕ್ತಿವರ್ಧಕವಾಗುವ ನಿರೀಕ್ಷೆಗಳಿವೆ. ಹೀಗಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು, ಮುಖಂಡರು, ಬೆಂಬಲಿಗರು ಯಾತ್ರೆಯಲ್ಲಿ ಭಾಗವಹಿಸುವಂತೆ ಯೋಜನೆ ರೂಪಿಸಲಾಗಿದೆ.
ಪ್ರತಿಯೊಂದು ವ್ಯವಸ್ಥೆಗಳಿಗೂ ಉಪಸಮಿತಿಗಳನ್ನು ರಚಿಸಲಾಗಿದೆ. ಸೆ.7ರಿಂದ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಈ ಯಾತ್ರೆ ಈವರೆಗೂ ಕೇರಳದಲ್ಲಿ ಒಂದು ದಿನದ ವಿಶ್ರಾಂತಿಯನ್ನು ಹೊರತುಪಡಿಸಿ ನಿರಂತರವಾಗಿ ಮುಂದುವರೆದಿದೆ.