ಮೈಸೂರು, ಅ.1- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಇಂದು ಚಾಮರಾಜನಗರ ಗಡಿ ದಾಟಿ ಮೈಸೂರು ಜಿಲ್ಲೆ ಪ್ರವೇಶಿಸಿದೆ. ರಾಜ್ಯದಲ್ಲಿ ಎರಡನೆ ದಿನದ ಯಾತ್ರೆ ಇಂದು ಬೆಳಗ್ಗೆ ಮಳೆಯ ಕಾರಣಕ್ಕೆ ಕೆಲ ಕಾಲ ವಿಳಂಬವಾಗಿ ಆರಂಭವಾಗಿ ಆರಂಭವಾಯಿತು.
ಮುಂಜಾನೆ 6.30ಕ್ಕೆ ಯಾತ್ರೆ ಆರಂಭಕ್ಕೆ ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಮಳೆಯ ಕಾರಣಕ್ಕೆ ಎಂಟು ಗಂಟೆ ಸುಮಾರಿಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ತೊಂಡವಾಡಿ ಗೇಟ್‍ನಿಂದ ಆರಂಭವಾಯಿತು. ಮೈಸೂರು ಜಿಲ್ಲೆ ಪ್ರವೇಶಿಸಿದ ಪಾದಯಾತ್ರೆ 12 ಕಿಲೋ ಮೀಟರ್ ದೂರದ ಬಳಿಕ ಕಳಲೆ ಗೇಟ್ ಬಳಿ ವಿಶ್ರಾಂತಿ ಪಡೆಯಿತು. ಮಧ್ಯಾಹ್ನ ಅಲ್ಲಿಂದ ಮತ್ತೆ ಯಾತ್ರೆ ಶುರುವಾಗಲಿದೆ.
ಹಾದಿ ಮಧ್ಯೆ ಜ್ಯೂಸ್, ಹಣ್ಣುಗಳನ್ನು ಹಂಚುವ ಮೂಲಕ ಧಣಿವನ್ನು ತಣಿಸುವ ಪ್ರಯತ್ನ ನಡೆಸಲಾಯಿತು. ಕೆಲವೊಮ್ಮೆ ಧಣಿದಿದ್ದ ಜನ ಹಣ್ಣು ಸೇವೆನೆಗೆ ಮುಗಿಬಿದ್ದರು. ರಾಹುಲ್‍ಗಾಂಧಿಯವರೊಂದಿಗೆ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಶಾಸಕರಾದ ಕೆ.ಜೆ.ಜಾರ್ಜ್, ಯತೀಂದ್ರ, ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ , ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತಿತರರು ಹೆಜ್ಜೆ ಹಾಕಿದರು.
ತುಂತುರು ಮಳೆ ಹಾಗೂ ಜೋರು ಗಾಳಿಯ ನಡುವೆಯೂ ಯಾತ್ರೆ ನಿರಾತಂಕವಾಗಿ ಸಾಗಿತ್ತು. ದಾರಿಯುದ್ದಕ್ಕೂ ರಾಜ್ಯದ ನಾಯಕರ ಫೋಟೋಗಳು ರಾರಾಜಿಸುತ್ತಿದ್ದವು. ಸೇವಾದಳದ ಕಾರ್ಯಕರ್ತರು ತ್ರೀವರ್ಣ ಧ್ವಜ ಹಿಡಿದು ಶಿಸ್ತಿನಿಂದಲೇ ಹೆಜ್ಜೆ ಹಾಕಿದರು.
ರಾಹುಲ್‍ಗಾಂಧಿಯೊಂದಿಗೆ ಜನ ಸಾಮಾನ್ಯರು, ಕಾರ್ಯಕರ್ತರು ಹೆಜ್ಜೆ ಹಾಕಲು ಪ್ರಯತ್ನಿಸಿದರಾದರೂ ಅದಕ್ಕೆ ಇಂದು ಹೆಚ್ಚಿನ ಅವಕಾಶ ಸಿಗಲಿಲ್ಲ. ಈ ಮೊದಲು ತಮಿಳುನಾಡು, ಕೇರಳದಲ್ಲಿ ಸಾಮಾನ್ಯ ಭದ್ರತೆ ಒದಗಿಸಲಾಗಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿ ಪ್ರತಿಭಟನೆಯ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಝಡ್-ಪ್ಲಸ್ ಭದ್ರತೆ ಒದಗಿಸಿದರು.
ಯಾತ್ರೆಯ ಎರಡು ಬದಿಯಲ್ಲಿ ಹಗ್ಗ ಹಿಡಿದು ರಾಹುಲ್‍ಗಾಂಧಿ ಸಮೀಪ ಜನ ಸಾಮಾನ್ಯರು ಸುಲಭವಾಗಿ ತಲುಪದಂತೆ ಎಚ್ಚರಿಕೆ ವಹಿಸಿದ್ದರು. ತಮಿಳುನಾಡಿನಲ್ಲಿ ಇದೇ ರೀತಿ ಹಗ್ಗ ಬಳಸಿ ಭದ್ರತೆ ಒದಗಿಸಿದಾಗ ಖುದ್ದು ರಾಹುಲ್‍ಗಾಂಧಿಯವರೇ ಅದನ್ನು ತೆಗೆಸಿದ್ದರು.
ಇಲ್ಲಿ ಬಿಗ ಭದ್ರತೆ ಹೆಚ್ಚಾಗಿತ್ತು, ರಾಹುಲ್ ಅವರ ಮುಂದೆ ಮತ್ತು ಹಿಂದೆ ಪೊಲೀಸ್ ಸರ್ಪಗಾವಲು ಬಿಗಿಗೊಳಿಸಲಾಗಿತ್ತು. ಆಯ್ದ ನಾಯಕರು ಮಾತ್ರ ಸರದಿಯಂತೆ ರಾಹುಲ್ ಅವರ ಬಳಿ ಹೋಗಿ ಮಾತನಾಡುತ್ತಾ ಸ್ವಲ್ಪ ದೂರ ಹೆಜ್ಜೆ ಹಾಕಿದರು.
ಹಿರಿಯ ನಾಯಕರು ಗುರುತಿಸಿ ಸೂಚಿಸಿದ ಸಾಮಾನ್ಯ ಕಾರ್ಯಕರ್ತರು, ಪ್ರಮುಖರು ರಾಹುಲ್ ಅವರ ಜೊತೆಯಾಗಿ ಸ್ವಲ್ಪ ದೂರು ಹೆಜ್ಜೆ ಹಾಕಿ ಫೋಸೋ ತೆಗೆಸಿಕೊಂಡರು. ಕೆಲ ಫೋಲೀಸ್ ಅಧಿಕಾರಿಗಳು ರಾಹುಲ್ ಕೈಕುಲುಕಿ ಫೋಟೋ ತೆಗೆಸಿಕೊಂಡಿದ್ದು ಕಂಡು ಬಂತು. ನಿನ್ನೆ ರಾಹುಲ್ ಅವರ ವೇಗಕ್ಕನುಗುಣವಾಗಿ ನಡೆಯಲಾಗದೆ ಎದುಸಿರು ಬಿಟ್ಟಿದ್ದ ಕಾಂಗ್ರೆಸ್‍ನ ಹಿರಿಯ ನಾಯಕರು ಇಂದು ಸುಧಾರಿಸಿಕೊಂಡು ಸರಿ ಸಮನಾಗಿ ಹೆಜ್ಜೆ ಹಾಕಿದರು.