ಭಾರತ ಐಕ್ಯತಾ ಯಾತ್ರೆ ವೇಳೆ ವಿದ್ಯುತ್ ಅವಘಡ, ಕೆಲ ಕಾರ್ಯಕರ್ತರಿಗೆ ಗಾಯ

Social Share

ಬಳ್ಳಾರಿ ಅ.17- ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ 39ನೇ ದಿನವಾದ ಇಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಮುಂದುವರೆಯಿತು. ಯಾತ್ರೆ ನಡುವೆಯೇ ವಿದ್ಯುತ್ ಅವಘಡ ಸಂಭವಿಸಿ ಕೆಲ ಕಾರ್ಯಕರ್ತರು ಗಾಯಗೊಂಡ ಘಟನೆ ನಡೆದಿದೆ.

ಬೆಳಗ್ಗೆ ಸಂಗನಕಲ್ಲಿನಿಂದ ಪಾದಯಾತ್ರೆ ಆರಂಭವಾಯಿತು. 13.3ಕಿಮೀ ಕ್ರಮಿಸಿದ ಯಾತ್ರೆ ಮೋಕ ಜಂಕ್ಷನ್ ತಲುಪಿತ್ತು. ಸಂಜೆ ಸಿಂಧವಾಳಾ ಬೆಣ್ಣಿಕಲ್ಲು ಗ್ರಾಮದ ಬಳಿ ಸಾರ್ವಜನಿಕ ಸಭೆಯಲ್ಲಿ ರಾಹುಲ್‍ಗಾಂಧಿ ಮಾತನಾಡಿ, ರಾತ್ರಿ ಮರಳಿ ಸಂಗನಕಲ್ಲಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ದಿನದ ಪಾದಯಾತ್ರೆ 20ಕಿಮೀ ಸಂಚರಿಸಲಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ , ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಶಾಸಕರಾದ ನಾಗೇಂದ್ರ ಯಾತ್ರೆಗೆ ಜೊತೆಗೂಡಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಬೆಂಗಳೂರಿಗೆ ವಾಪಸ್ಸಾಗಿದ್ದು, ಇಂದು ಬೆಳಗ್ಗೆ ಗೈರು ಹಾಜರಾಗಿದ್ದರು. ಡಿ.ಕೆ.ಶಿವಕುಮಾರ್ ತಡವಾಗಿ ಯಾತ್ರೆಗೆ ಜೊತೆಯಾದರು. ನಾಗೇಂದ್ರ ಅವರು ತಮ್ಮ ಕ್ಷೇತ್ರದ ಪರಿಚಯ ಮಾಡಿಕೊಡುತ್ತಾ ಹೆಜ್ಜೆ ಹಾಕಿದರು.

ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳು ಆಂಧ್ರ ಪ್ರದೇಶ ಗಡಿಗೆ ಹೊಂದಿಕೊಂಡಿದ್ದು, ಮಾರ್ಗ ಮಧ್ಯೆ ಆಂಧ್ರ ಪ್ರದೇಶದ ಕೆಲ ಗ್ರಾಮಗಳನ್ನು ಹಾದು ಹೋಗಲಿದೆ. ಮೊನ್ನೆ ರಾಯದುರ್ಗ ತಾಲ್ಲೂಕಿನ ಕೆಲ ಗ್ರಾಮಗಳನ್ನು ಹಾದು, ಮರಳಿ ಬಳ್ಳಾರಿಗೆ ಆಗಮಿಸಿತ್ತು. ಇಂದು ಮತ್ತೆ ಮೋಕಾ ಗ್ರಾಮದ ಮೂಲಕ ಮತ್ತೆ ಯಾತ್ರೆ ಆಂಧ್ರ ಪ್ರದೇಶ ಪ್ರವೇಶಿಸಿತ್ತು.

ಮೋಕಾ ಗ್ರಾಮದಲ್ಲಿ ಭರ್ಜರಿ ಸ್ವಾಗತ ದೊರೆಯಿತು. ತುಂಗಭದ್ರಾ ನದಿ ದಡದಲ್ಲಿರುವ ಗ್ರಾಮದಲ್ಲಿ ಯಾತ್ರೆ ಮುಂದುವರೆಯಿತು. ಮೋಕಾ ಗ್ರಾಮದಲ್ಲಿ ಜಿಟಿಜಿಟಿ ತುಂತುರು ಮಳೆ ಶುರುವಾಗಿತ್ತು. ಆದರೂ ಲೆಕ್ಕಿಸದೆ ಎರಡು ಕಿಲೋ ಮೀಟರ್ ರಾಹುಲ್‍ಗಾಂ ಮಳೆಯಲ್ಲೇ ಹೆಜ್ಜೆ ಹಾಕಿದರು.

ಮೊಕಾ ಬಳಿ ವಿದ್ಯುತ್ ಅವಘಡವೂ ಸಂಭವಿಸಿದೆ. ನಾಲ್ವರು ಕಾಂಗ್ರೆಸ್ ಕಾರ್ಯಕರ್ತರಿಗೆ ವಿದ್ಯುತ್ ತಂತಿ ತಾಗಿ, ಗಾಯಗೊಂಡಿದ್ದಾರೆ. ಅವರನ್ನು ಅಂಬುಲೆನ್ಸ್‍ನಲ್ಲಿ ಬಳ್ಳಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹಾದಿ ಮಧ್ಯೆ ಮಹಿಳೆಯೊಬ್ಬರು ಅತ್ಯುತ್ಸಾಹದಿಂದ ರಾಹುಲ್‍ಗಾಂಧಿಯನ್ನು ಭೇಟಿ ಮಾಡಲು ನುಸುಳಿ ಬಂದರು, ತಕ್ಷಣವೇ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ಉಳಿದಂತೆ ಬಹಳಷ್ಟು ಯುವ ಸ್ನೇಹಿತರ ಜೊತೆ ರಾಹುಲ್‍ಗಾಂ ಹೆಜ್ಜೆ ಹಾಕಿದರು. ತಂದೆಯೊಬ್ಬ ತನ್ನ ಚಿಕ್ಕಮಗುವನ್ನು ಎತ್ತಿಕೊಂಡು ರಾಹುಲ್‍ಗಾಂಧಿಯೊಂದಿಗೆ ನಡೆದರು. ಚಾಕೋಲೆಟ್ ರ್ಯಾಪರ್ ಖುದ್ದು ಬಿಡಿಸಿ ಮಗುವಿಗೆ ರಾಹುಲ್ ಚಾಕ್‍ಲೆಟ್ ತಿನಿಸಿದರು.

ತಮ್ಮನ್ನು ನೋಡಲು ಮನೆಯ ಮುಂದೆ ನಿಂತಿದ್ದ ಮಹಿಳೆಯರನ್ನು ಹತ್ತಿರ ಕರೆದು ಅವರ ಜೊತೆ ನಿಂತು ರಾಹುಲ್ ಫೋಟೋಗೆ ಫೋಸ್ ನೀಡಿದರು. ಹಿರಿಯ ಸಾಮಾಜಿಕ ಕಾರ್ಯಕರ್ತರು, ಬಾವುಟ ಹಿಡಿದ ಹೋರಾಟಗಾರರು, ಯುವತಿಯರು, ಚಿಕ್ಕಮಕ್ಕಳು ರಾಹುಲ್‍ಗಾಂ ಜೊತೆ ನಡೆದರು. ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತ ತ್ರೀವರ್ಣ ಧ್ವಜವನ್ನು ಹಾರಿಸುವ ಮೂಲಕ ರಾಹುಲ್‍ಗಾಂಧಿಯತ್ತ ಕೈ ಬಿಸಿ ಬೆಂಬಲ ವ್ಯಕ್ತ ಪಡಿಸಿದ್ದು ವಿಶೇಷವಾಗಿತ್ತು. ಶಿವನವೇಷಧಾರಿಯ ಕೈ ಹಿಡಿದು ರಾಹುಲ್ ನಡೆದರು. ಡಿ.ಕೆ.ಶಿವಕುಮಾರ್ ತ್ರೀಶೂಲ ಪ್ರದರ್ಶನ ಮಾಡಿದರು.

Articles You Might Like

Share This Article