ಬೆಂಗಳೂರು,ಅ.3- ದೇಶದ ಗಂಭೀರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ ಐಕ್ಯತಾ ಯಾತ್ರೆ ಇಂದು ಮಂಡ್ಯ ಜಿಲ್ಲೆಗೆ ಪ್ರವೇಶ ಪಡೆದಿದೆ. ಬೆಳಗ್ಗೆ ಮೈಸೂರಿನ ಹರ್ಡಿಂಗ್ ಸರ್ಕಲ್‍ನ ಆರ್‍ಗೇಟ್ ನಿಂದ ಆರಂಭವಾದ ಪಾದಯಾತ್ರೆ ಶ್ರೀರಂಗಪಟ್ಟಣ ಪ್ರವೇಶಿಸಿತು. ಮಾಜಿ ಸಚಿವ ಚಲುವರಾಯಸ್ವಾಮಿ ಪಾದಯಾತ್ರೆಯನ್ನು ಬರಮಾಡಿಕೊಂಡರು.
ಹಾದಿಮಧ್ಯೆ ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಜೀದ್ ಇ-ಅಂಜಂ ಮಸೀದಿಗೆ ಮತ್ತು ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್ ಚರ್ಚ್‍ಗೆ ನಂತರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ಕೊಟ್ಟರು. ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಸಾಥ್ ನೀಡಿದರು.
ಇಂದು ಪಾದಯಾತ್ರೆಯಲ್ಲಿ ತೆಲಂಗಾಣದ ರಮೇಶ್ ನಾಯಕ್ ಎಂಬ ಅಭಿಮಾನಿ ಭಾಗವಹಿಸಿದ್ದು, ಆತ ತನ್ನ ಎದೆಯ ಮೇಲೆ ರಾಹುಲ್ ಗಾಂಧಿಯವರ ಟ್ಯಾಟೂವನ್ನು ಎದೆ ಮೇಲೆ ಹಾಕಿಸಿಕೊಂಡಿರುವುದು ಗಮನಸೆಳೆದರು. ದಾರಿಮಧ್ಯೆ ಕಸ್ತೂರಿ ನಿವಾಸ ಹೋಟೆಲ್‍ಗೆ ತೆರಳಿದ ರಾಹುಲ್ ಗಾಂಧಿ ರಾಜ್ಯ ನಾಯಕರ ಜೊತೆ ಉಪಹಾರ ಸೇವಿಸಿದರು. ಪಾದಯಾತ್ರೆ ಮಂಡ್ಯ ಜಿಲ್ಲೆ ಯ ಗಡಿಪ್ರವೇಶಿಸುತ್ತಿದ್ದಂತೆ ರಾಹುಲ್ ಗಾಂಧಿಗೆ ನಗುವನಹಳ್ಳಿ ಜನ ಕುರಿಯನ್ನು ಕೊಡುಗೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ಇಂದೂ ಕೂಡ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮೈಸೂರು ನಗರದಲ್ಲಿ ಶಾಸಕ ತನ್ವೀರ್ ಸೇಠ್ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಸಾಥ್ ನೀಡಿದರು.
ಇಂದು ಸಂಜೆ ಪಾಂಡವಪುರಕ್ಕೆ ಆಗಮಿಸುವ ಮೂಲಕ ದಿನದ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಸಂಜೆ ಮೈಸೂರಿನ ಜೆಎಸ್‍ಎಸ್‍ನ ಮೈದಾನದ ವಸ್ತು ಪ್ರದರ್ಶನದ ಆವರಣದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.