ಸಿಎಂ ಬೊಮ್ಮಾಯಿ ಪುತ್ರನಿಗೂ ಕೊರೋನಾ ಪಾಸಿಟಿವ್

Social Share

ಬೆಂಗಳೂರು,ಜ.11- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೆ ಇದೀಗ ಅವರ ಪುತ್ರ ಭರತ್ ಬೊಮ್ಮಾಯಿಗೂ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದ ಸದಸ್ಯರ ವರದಿಯನ್ನು ನಿರೀಕ್ಷಿಸಲಾಗಿದೆ.
ಈ ಕುರಿತು ಭರತ್ ಬೊಮ್ಮಾಯಿ ಟ್ವೀಟ್ ಮಾಡಿದ್ದು, ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೇವಲ ಸೂಕ್ಷ್ಮ ಲಕ್ಷಣಗಳನ್ನು ಹೊಂದಿದ್ದೇನೆ. ಇದೀಗ ಮನೆಯಲ್ಲಿಯೇ ಐಸೋಲೇಷನ್‍ನಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ತಿಳಿಸುತ್ತೇನೆ ಎಂದಿದ್ದಾರೆ.
ನಿನ್ನೆ ಬಸವರಾಜ ಬೊಮ್ಮಾಯಿ ಅವರು ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಸೌಮ್ಯ ಲಕ್ಷಣಗಳು ಇದ್ದದ್ದರಿಂದ ಕೊರೊನಾ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಸ್ವಯಂ ಐಸೊಲೇಟ್ ಆಗಿರುವಂತೆ ತಿಳಿಸಿದ್ದರು.
ಬೊಮ್ಮಾಯಿ ಅವರು ಸೋಮವಾರ ಬೂಸ್ಟರ್ ಡೋಸ್ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೇ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದರು.
ಆರೋಗ್ಯ ಸಚಿವ ಸುಧಾಕರ್, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸಿಎಂ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ಅಷ್ಟೇ ಅಲ್ಲದೇ ಆಡಳಿತ ಸುಧಾರಣಾ ಸಂಬಂಧ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದರು.
ಸಿಎಂ ಬೊಮ್ಮಾಯಿ ಅವರು ಆರ್.ಟಿ ನಗರದ ಖಾಸಗಿ ನಿವಾಸ,ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸ, ಗೃಹ ಕಚೇರಿ ಕೃಷ್ಣಾ ಮೂರು ಕಡೆ ನಿನ್ನೆ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು, ಖಾಸಗಿ, ಸರ್ಕಾರಿ ನಿವಾಸದ ಸಿಬ್ಬಂದಿ, ಗೃಹ ಕಚೇರಿ ಸಿಬ್ಬಂದಿಗೆ ಕೋವಿಡ್ ತಪಾಸಣೆ ಮಾಡಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ.

Articles You Might Like

Share This Article