ಚಿತ್ರದುರ್ಗ,ಅ.11- ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಇಂದು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹತ್ತಿಕೋಟೆಯಿಂದ ಸಾಣೆಕೆರೆವರೆಗೂ ತುಂತುರು ಮಳೆಯಲ್ಲೇ ಹೆಜ್ಜೆ ಹಾಕಿತು.
ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾದ ಯಾತ್ರೆ ಆನಂತರ ಅಬಾಧಿತವಾಗಿ ಮುಂದುವರೆಯಿತು. ಯಾತ್ರೆಯಲ್ಲಿ ಭಾಗವಹಿಸಲು ಜನೋತ್ಸಾಹ ಮೇರೆ ಮೀರಿದ್ದು, ಕೆಲವು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು.
ಪಾದಯಾತ್ರೆ ನಡುವೆಯೂ ಜನರೊಂದಿಗೆ ಸಂವಾದ ನಡೆಸುತ್ತಿರುವ ರಾಹುಲ್ ಗಾಂಧಿ ತಮಗಾಗಿ ರಸ್ತೆಬದಿಯಲ್ಲಿ ಕಾಯುತ್ತಿದ್ದ ಚಿಕ್ಕಮಗಳನ್ನು ಕರೆದು ಮಾತನಾಡಿಸಿದರು. ಈ ವೇಳೆ ಕಾಂಗ್ರೆಸ್ ಬಾವುಟ ಹಿಡಿದು ಹೆಜ್ಜೆ ಹಾಕಿದ ಬಾಲಕನೊಬ್ಬನ ಕೈ ಹಿಡಿದು ರಾಹುಲ್ ಗಾಂಧಿ ಸಾಥ್ ನೀಡಿದರು.
ಚಿಕ್ಕಮಕ್ಕಳೊಂದಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಮುನ್ನುಗಿ ಬರುತ್ತಿದ್ದ ಯುವಕನೊಬ್ಬನನ್ನು ಭದ್ರತಾ ಸಿಬ್ಬಂದಿಗಳು ತಡೆದು ವಾಪಸ್ ಕಳುಹಿಸಿದರು. ಸುಮಾರು 6 ಮಕ್ಕಳು ರಾಹುಲ್ ಮುಂದೆ ಉತ್ಸಾಹದಲ್ಲಿ ಹೆಜ್ಜೆ ಹಾಕುತ್ತಿದ್ದರು. ಸ್ವಲ್ಪ ದೂರದ ಬಳಿಕ ಅವರ ನಡುವೆ ಪೈಪೋಟಿ ಸೃಷ್ಟಿಸಿ ರಾಹುಲ್ ಗಾಂಧಿ ಓಟದ ಸ್ಪರ್ಧೆ ನಡೆಸಿದರು. ಮಕ್ಕಳು ಖುಷಿಯಿಂದ ರನ್ ರೇಸ್ ಮಾಡಿದರು. ನಂತರ ಅವರ ಜೊತೆ ರಾಹುಲ್ ಮತ್ತಷ್ಟು ದೂರ ಹೆಜ್ಜೆ ಹಾಕಿದರು.
ಅಭಿಮಾನಿಯೊಬ್ಬ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲೇಬೇಕು ಎಂದು ತುಡಿತದೊಂದಿಗೆ ಪರದಾಡುತ್ತಿದ್ದ. ಕೊನೆಗೂ ಆತನಿಗೆ ಅವಕಾಶ ಸಿಕ್ಕಿದಾಗ ಖುಷಿಯಿಂದ ರಾಹುಲ್ ಗಾಂಧಿ ಅವರ ಕೈಗೆ ಚುಂಬಿಸಿ ಸಂತಸ ಹಂಚಿಕೊಂಡ.
ಹಾದಿ ಮಧ್ಯೆ ಕೂಲಿ ಕಾರ್ಮಿಕರು ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ಸಂವಾದ ನಡೆಸಿದರು. ಅವರ ಅನುಭವಗಳನ್ನು ಹೇಳಿ ಅರ್ಥೈಸಿಕೊಳ್ಳುವ ಯತ್ನ ಮಾಡಿದರು. ಸಾಣೆಕೆರೆ ಸಮೀಪ ಖಾಸಗಿ ಹೋಟೆಲ್‍ನಲ್ಲಿ ಟೀ ಬ್ರೇಕ್‍ಗಾಗಿ ಬಿಡಲಾಗಿತ್ತು. ಮತ್ತೆ ಯಾತ್ರೆ ಶುರುವಾದಾಗ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ವೈಭವೀಕರಿಸುವ ಹಾಡೊಂದನ್ನು ಯಾತ್ರೆಯಲ್ಲಿ ಹಾಕಲಾಯಿತು. ಕನಕಪುರ ಬಂಡೆ ಇವನು ಎಂಬ ಹಾಡು ಒಂದಿಷ್ಟು ಕಾಲ ಮನರಂಜನೆ ನೀಡಿತು.
ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ತೆರಳುತ್ತಾರೆ ಎಂದು ಪಾದಯಾತ್ರೆ ಸ್ಥಗಿತಗೊಳ್ಳಲಿದೆ ಎಂಬ ವದಂತಿಗಳು ಹರಡಿದ್ದವು. ಆದರೆ ಯಾತ್ರೆ ಯಾವುದೇ ಅಡೆತಡೆ ಇಲ್ಲದೆ ಅಬಾಧಿತವಾಗಿ ಮುಂದುವರೆದಿತ್ತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ, ಮಾಜಿ ಸಚಿವ ಡಿ.ಸುಧಾಕರ್ ಸೇರಿದಂತೆ ಅನೇಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬೆಳಗೆ ಮೊದಲ ಹಂತದ ಪಾದಯಾತ್ರೆ 15 ಕಿ.ಮೀ ಕ್ರಮಿಸಿದ್ದು, ಸಾಣೆಕೆರೆ ಬಳಿ ವಿಶ್ರಾಂತಿ ಪಡೆದು ಭೋಜನ ವಿರಾಮದ ಬಳಿಕ ಪುನರಾರಂಭವಾಗಲಿದೆ.