ಬೆಂಗಳೂರು,ಸೆ.15- ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳ ಮೇಲೆ ಕಣ್ಗಾವಲು ಇಡಲು ಸಮಿತಿ ರಚನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೃಹಸಚಿವರು ಡಾ.ಜಿ.ಪರಮೇಶ್ವರ್ ಅಥವಾ ಪ್ರಿಯಾಂಕ್ ಖರ್ಗೆಯೋ ಎಂಬುದು ಗೊತ್ತಾಗುತ್ತಿಲ್ಲ. ಫ್ಯಾಕ್ಟ್ ಚೆಕ್ ಸಮಿತಿ ಮಾಡುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ಸುಳ್ಳು ಮಾಹಿತಿ ಪತ್ತೆ ಮಾಡುತ್ತೇವೆ ಎನ್ನುತ್ತಾ ಗೃಹ ಸಚಿವರ ಅಧಿಕಾರವನ್ನು ಕಿತ್ತುಕೊಂಡು ಸಂವಿಧಾನವಿಲ್ಲದ ಅವಕಾಶವಿಲ್ಲದ ಕಾಯ್ದೆ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ಪದ್ಮನಾಭನಗರದಲ್ಲಿ ಬಿಬಿಎಂಪಿ ಚುನಾವಣೆಗೆ ಡಿಕೆಶಿ ಗೇಮ್ ಪ್ಲಾನ್
ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಎಲ್ಲ ಅಂಶಗಳಿವೆ, ಪೊಲೀಸ್ ಇಲಾಖೆ ಏನೆಲ್ಲ ಪಾಲನೆ ಮಾಡಬೇಕೆಂದು ತಿಳಿಸಿದೆ. ಮಾತನಾಡುವ, ಪ್ರತಿಕ್ರಿಯಿಸುವ, ವಿಮರ್ಶಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿರ ಬೇಕು. ಡಿಜಿಟಲ್ ಫಾರ್ಮ್ ನಲ್ಲಿ ಇರುವುದನ್ನೂ ಸ್ವೀಕರಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿ, 66ಎ ಕಾಯ್ದೆಯನ್ನು ವಜಾಗೊಳಿಸಿದೆ. ಮತ್ತದೇ ಕಾಯ್ದೆಯನ್ನು ಪ್ರಿಯಾಂಕ್ ಖರ್ಗೆ ಹಿಂಬಾಗಿಲ ಮೂಲಕ ತರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದ ಕಾರ್ಯಶೈಲಿ, ನೀತಿ-ನಿರ್ಧಾರಗಳಲ್ಲಿನ ಲೋಪದೋಷಗಳನ್ನು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವವರು ಬಯಲುಗೊಳಿಸುತ್ತಿದ್ದಾರೆ. ಈ ಟೀಕೆ-ಟಿಪ್ಪಣೆ, ಸರ್ಕಾರದ ಸುಳ್ಳು ಹೊರ ಬರುತ್ತಿರುವುದು ಸಹಿಸಲಾಗುತ್ತಿಲ್ಲ. ಚರ್ಚೆಗೆ ಉತ್ತರಿಸಲಾಗದೆ ಪಲಾಯನವಾದ ಅನುಸರಿಸಿದೆ.
ಜನರಿಗೆ ಬ್ಲಾಕ್ಮೇಲ್ ಮಾಡಲು, ಹೆದರಿಸಲು ಕಾಯ್ದೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಎಫ್ಐಆರ್ ದಾಖಲಿಸಿ ಬೆದರಿಕೆ ಹಾಕಬಹುದೇ ಹೊರತು ಸಾಬೀತುಪಡಿಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ತಿರಸ್ಕರಿಸಿದ 66ಎ ಕಾನೂನು ಜಾರಿಗೆ ಅವಕಾಶವಿಲ್ಲ ಎಂದು ಭಾಸ್ಕರರಾವ್ ಹೇಳಿದರು.
#BhaskarRao, #Congress, #Socialmedia, #surveillance