ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಭವಾರಿಯಾ ಗ್ಯಾಂಗ್ ಅರೆಸ್ಟ್..!

ಬೆಂಗಳೂರು, ಆ.25- ವಿಜಯನಗರ ಉಪವಿಭಾಗದ ಪೊಲೀಸರು ಭವಾರಿಯಾ ಗ್ಯಾಂಗ್‍ನ ಐದು ಮಂದಿ ಕುಖ್ಯಾತ ಸರಗಳ್ಳರನ್ನು ಬಂಧಿಸಿ 13 ಲಕ್ಷ ರೂ. ಬೆಲೆಯ ಚಿನ್ನಾಭರಣ, 2 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ. ರಾಹುಲ್, ತುಳಸಿ, ನಿತಿನ್, ರಿಯಾಜ್ ಅಹಮ್ಮದ್, ಕಮಲ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಉತ್ತರ ಪ್ರದೇಶದ ಮೂವರು ಹಾಗೂ ದೆಹಲಿಯ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಂಧನದಿಂದ ಆರು ಸರಗಳ್ಳತನ ಹಾಗೂ ಒಂದು ಮನೆಗಳ್ಳತನ ಪ್ರಕರಣ ಬೆಳಕಿಗೆ ಬಂದಿವೆ. ಭವಾರಿಯಾ ಗ್ಯಾಂಗ್‍ನ ಆರೋಪಿಗಳು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೈಕ್ ಅನ್ನು ಗೂಡ್ಸ್ ರೈಲಿನಲ್ಲಿ ತರಿಸಿಕೊಂಡು ಆ ಬೈಕ್ ಬಳಸಿ ಸರಗಳ್ಳತನ ಮಾಡುತ್ತಿದ್ದರು.

ಕಳೆದ 10 ದಿನಗಳ ಹಿಂದೆ ವಿಮಾನದಲ್ಲಿ ಬಂದ ಈ ಗ್ಯಾಂಗ್ ಬೆಂಗಳೂರು ಹೊರ ವಲಯದ ಗುಬ್ಬಲಾಳದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ತಾವು ತಂದಿರುವ ಬೈಕ್‍ನಲ್ಲಿ ಮೂವರು ಸರಗಳ್ಳತನ ಮಾಡಲು ಹೋಗುತ್ತಿದ್ದರು. ಒಬ್ಬಾತ ಕೆಳಗೆ ಇಳಿದಾಗ ಹಿಂಬದಿ ಸವಾರ ಸರ ಎಗರಿಸುತ್ತಿದ್ದ. ನಂತರ ಮತ್ತೆ ಈ ಮೂವರು ಬೈಕ್ ಹತ್ತಿಕೊಂಡು ಪರಾರಿಯಾಗುತ್ತಿದ್ದರು. ಈ ಗ್ಯಾಂಗ್‍ನ ಮೂವರು ಒಂದೇ ದಿನ ಎರಡು-ಮೂರು ಸರಣಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಮರು ದಿನ ಇದೇ ಗ್ಯಾಂಗ್‍ನ ಮತ್ತಿಬ್ಬರು ಸರಗಳ್ಳತನ ಮಾಡುತ್ತಿದ್ದರು.

ಸಾಕಷ್ಟು ಸರಗಳ್ಳತನ ಮಾಡಿದ ನಂತರ ಈ ಗ್ಯಾಂಗ್ ಚಿನ್ನಾಭರಣಗಳ ಜತೆ ನಗರದಿಂದ ದೆಹಲಿಗೆ ವಿಮಾನದಲ್ಲಿ ವಾಪಸ್ ಹೋಗುತ್ತಿದ್ದರು. ಕದ್ದ ಸರಗಳನ್ನು ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಸ್ವಲ್ಪ ದಿನದ ನಂತರ ಈ ಗ್ಯಾಂಗ್‍ನ ಮತ್ತೊಂದು ತಂಡ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡುತ್ತಿತ್ತು. ಕಳ್ಳತನ, ಸರಗಳ್ಳತನ ಮಾಡುವುದೇ ಈ ಗ್ಯಾಂಗ್‍ನ ವೃತ್ತಿ. ಈ ಗ್ಯಾಂಗ್ ದೇಶದ ವಿವಿಧ ರಾಜ್ಯಗಳಲ್ಲಿ ಸರಗಳ್ಳತನ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಇದೇ ರೀತಿ ಕೇರಳ, ಹೈದರಾಬಾದ್‍ನಲ್ಲೂ ಈ ಗ್ಯಾಂಗ್ ಸರಗಳ್ಳತನ ಹಾಗೂ ಕಳ್ಳತನ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್, ಮಾಗಡಿ ರಸ್ತೆ ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.