ಭೂಪಾಲ್,ಫೆ.22- ಮಧ್ಯಪ್ರದೇಶ ಸರ್ಕಾರವು 2008ರ ಅಹಮಾದಾಬಾದ್ ಸರಣಿ ಸ್ಪೋಟದ ಆರು ಅಪರಾಧಿಗಳನ್ನು ಇರಿಸಿರುವ ಭೂಪಾಲ್ ಕೇಂದ್ರೀಯ ಕಾರಾಗೃಹದ ಭದ್ರತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ಸೆರೆಮನೆಯ ಕಾವಲಿಗೆ ವಿಶೇಷ ಶಸ್ತ್ರ ತಡೆಯ ತಂಡವೊಂದನ್ನು ಕಳುಹಿಸಲೂ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದ ಗೃಹಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಈ ಬಂಧಿಖಾನೆಯಲ್ಲಿ ಸೆರೆ ಇರಿಸಲಾಗಿರುವ ಆರು ಅಪರಾಧಿಗಳಲ್ಲಿ ಅಹಮದಾಬಾದ್ ಸ್ಪೋಟದ ಪ್ರಮುಖ ಸಂಚುಕೋರ ಸಫ್ದರ್ ನಾಗೋರಿ ಕೂಡ ಸೇರಿದ್ದಾನೆ. ಗುಜರಾತ್‍ನ ನ್ಯಾಯಾಲಯವು ಅಹಮಾದಾಬಾದ್ ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ 38 ಜನರಿಗೆ ಮರಣದಂಡನೆ ವಿಧಿಸಿದ್ದು ಅವರಲ್ಲಿ ನಾಗೋರಿ ಕೂಡ ಒಬ್ಬನಾಗಿದ್ದಾನೆ.
ಉನ್ನತ ಪೊಲೀಸ್ ಮತ್ತು ಜೈಲು ಅಧಿಕಾರಿಗಳ ಸಭೆ ಬಳಿಕ ರಾಜ್ಯ ಸರ್ಕಾರವು ಉನ್ನತಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಭೂಪಾಲ್ ಕಾರಾಗೃಹದಲ್ಲಿರುವ 6 ಉಗ್ರರನ್ನು ನೋಡಲು ಬಯಸುವವ ಮೇಲೆ, ಅಪರಾಧಿಗಳ ಆಹಾರ ಮತ್ತು ಭದ್ರತೆ ಕುರಿತು ಪ್ರತಿದಿನವೂ ಪರಿಶೀಲನೆ ನಡೆಸಲಿದೆ ಎಂದು ಮಿಶ್ರಾ ಹೇಳಿದ್ದಾರೆ.
