ಬಿಹಾರ ಸಚಿವ ಸಂಪುಟ ವಿಸ್ತರಣೆ

Social Share

ಪಾಟ್ನಾ, ಆ.16- ಬಿಹಾರದಲ್ಲಿ ಮಹಾಘಟ್ ಬಂಧನ್ ಮೂಲಕ ಅಧಿಕಾರಕ್ಕೆ ಬಂದ ಹೊಸ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಂದು ನಡೆದಿದೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜೆಸ್ವಿ ಯಾದವ್ ಅವರ ಸಮ್ಮುಖದಲ್ಲಿ 31 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಹಾರದ ವಿಧಾನಸಭೆ ಸಂಖ್ಯಾಬಲ ಆಧರಿಸಿ 36 ಸಚಿವರಿಗೆ ಅವಕಾಶ ಕಲ್ಪಿಸಬಹುದಾಗಿದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಂಪುಟದಲ್ಲಿ ಇರುವುದರಿಂದ ಇಂದು 31 ಮಂದಿ ನೂತನ ಸಚಿವರಾಗಿದ್ದಾರೆ. ದೊಡ್ಡ ರಾಜಕೀಯ ಪಕ್ಷವಾಗಿರುವ ಆರ್‍ಜೆಡಿಯಿಂದ 16, ಮುಖ್ಯಮಂತ್ರಿ ಅವರ ನೇತೃತ್ವದ ಜೆಡಿಯುಗೆ 11, ಕಾಂಗ್ರೆಸ್‍ನ ಇಬ್ಬರು, ಹಿಂದುಸ್ಥಾನಿ ಅವಾಮ್ ಮೋರ್ಚಾ ಪಕ್ಷದ ಒಬ್ಬರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.

ಈ ಹಿಂದೆ ಬಿಜೆಪಿ-ಆರ್‍ಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಜೆಡಿಯುನ ಹಲವರು ಸಂಪುಟದಲ್ಲಿ ಮುಂದುವರೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಬಳಿಕ ಬಿಜೆಪಿ-ಜೆಡಿಯು ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಎನ್‍ಡಿಎ ಕೂಟದಿಂದ ಹೊರ ಬಂದ ನೀತೀಶ್ ಕುಮಾರ್ ಆರ್‍ಜೆಡಿ, ಕಾಂಗ್ರೆಸ್ ಸೇರಿ ಏಳು ಪಕ್ಷಗಳ ಮಹಾಘಟ್‍ಬಂಧನ್ ಸರ್ಕಾರವನ್ನು ಆಗಸ್ಟ್ 10ರಂದು ರಚನೆ ಮಾಡಿದ್ದರು.

ಇಂದಿನ ಸಂಪುಟ ವಿಸ್ತರಣೆಯಲ್ಲಿ ಜೆಡಿಯುನ ಬೀಜೇಂದ್ರ ಯಾದವ್, ವಿಜಯ ಚೌದ್ರಿ, ಶರವಣ ಕುಮಾರ್, ಜಯಂತ್ ರಾಜ್, ಅಶೋಕ್ ಚೌದ್ರಿ, ಮದನ್ ಶಹ್ನಿ, ಸುನೀಲ್ ಕುಮಾರ, ಸಂಜಯರ್ ಜಾ, ಜಮಖಾನ್, ಸುಮೀತ್ ಕುಮಾರ್ ಸಿಂಗ್, ಲೆಸಿ ಸಿಂಗ್ ಸಂಪುಟ ಸೇರಿದ್ದಾರೆ.

ರಾಷ್ಟ್ರೀಯ ಜನತಾದಳದ ತೇಜ್‍ಪ್ರತಾಪ್ ಯಾದವ್, ಸುರೇಂದ್ರ ಯಾದವ್, ಚಂದ್ರಶೇಖರ್, ರಮಾನಂದ್ ಯಾದವ್, ಲಲಿತಾ ಯಾದವ್, ಕುಮಾರ್ ಸರಜ್ಬಿತ್ , ಕುಮಾರ್ ಸರ್ವಜಿತ್, ಕಾರ್ತಿಕೆ ಶರ್ಮಾ, ಶಹನಾವಾಜ್, ಸಮೀರ್ ಮಹಸೇಠ್, ಅನಿತಾ ದೇವಿ, ಅಲೋಕ ಮೆಹ್ತಾ, ಭರತ್ ಭೂಷಣ್ ಮಂಡಲ್, ಸುಧಾಕರ್ ಸಿಂಗ್, ಶಮಿಮ್ ಅಹಮ್ಮದ್, ಜಿತೇಂದ್ರ ರಾಯ್, ಕಾಂಗ್ರೆಸ್‍ನ ಮುರಾರಿ ಲಾಲ್ ಗೌತಮ್, ಅಫಕ್ ಆಲಂ ಸಚಿವರಾಗಿದ್ದರೆ. ಜಿತನ್ ರಾಮ್ ಮಾಂಜಿ ಹಿಂದುಸ್ತಾನಿ ಹವಾ ಮೊರ್ಚಾದಿಂದ ಸಂತೋಷ್ ಮಾಂಜಿ ಕೂಡ ಸಚಿವರಾಗಿದ್ದಾರೆ.

ಸಂಪುಟ ವಿಸ್ತರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಇಂದು ಸಂಪುಟ ಸಭೆ ನಡೆಯಲಿದೆ. ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Articles You Might Like

Share This Article