ನವದೆಹಲಿ,ಅ.2- ಲಂಡನ್‍ನಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಧೂಳು ಹಿಡಿದಿದ್ದ ಗಾಂಧಿ ಪ್ರತಿಮೆಯನ್ನು ತಮ್ಮ ಕರವಸ್ತ್ರದಿಂದ ಶುಚಿಗೊಳಿಸಿರುವ ವಿಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದೆ. ಕಳೆದ ತಿಂಗಳು ಲಂಡನ್‍ನಲ್ಲಿರುವ ಬ್ರಿಟಿಷ್ ಸಂಸತ್ತಿಗೆ ಭೇಟಿ ನೀಡಿದ್ದ ತೇಜಸ್ವಿ ಅವರು ಗಾಂಧಿ ಪ್ರತಿಮೆ ಮೇಲೆ ಇದ್ದ ಧೂಳನ್ನು ತಮ್ಮ ಕರವಸ್ತ್ರದಿಂದ ಶುಚಿಗೊಳಿಸುತ್ತಿರುವ ವಿಡಿಯೋ ತುಣಕನ್ನು ಆರ್‍ಜೆಡಿ ಶಾಸಕರೊಬ್ಬರು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.
ರಾಷ್ಟ್ರಪಿತನ ಐತಿಹಾಸಿಕ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋದಾಗ . ಅದರ ಮೇಲಿದ್ದ ಧೂಳನ್ನು ಕಂಡ ತೇಜಸ್ವಿ ಅವರು ತಮ್ಮ ಕರವಸ್ತ್ರದಿಂದ ಅದನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರು ಶಾಸಕ ಎಂದು ರಿಷಿ ಕುಮಾರ್ ಒಕ್ಕಣೆ ಬರೆದಿದ್ದಾರೆ.
ತೇಜಸ್ವಿ ಅವರ ಚಿಂತನೆಯು ಗಾಂಧಿ ಚಿಂತನೆಯಲ್ಲಿ ಅವರಿಗೆ ಇರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಶಾಸಕರು ಬರೆದುಕೊಂಡಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋ ತುಣುಕಿಗೆ ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪ್ರಚಾರಕ್ಕಾಗಿ ಇಂತಹ ವಿಡಿಯೋ ಹಾಕುವುದನ್ನು ಬಿಟ್ಟು ಕೊಳಕಾಗಿರುವ ಪಾಟ್ನಾ ನಗರವನ್ನು ಶುಚಿಗೊಳಿಸಿ ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ.