ಗಡಿಯಲ್ಲಿ ವಾಸಿಸುತ್ತಿದ್ದ ಬಡವರ ಮನೆ ಒಡೆಸಿದ ಟಿಎಂಸಿ ಕಾರ್ಯಕರ್ತ

Spread the love

ಮಾಲ್ಡಾ (ಪಶ್ಚಿಮ ಬಂಗಾಳ), ಮೇ 22- ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಅಂತಾರಾಜ್ಯ ಗಡಿಯುದ್ದಕ್ಕೂ ಬಿಹಾರ ಪೊಲೀಸರು ಒಂಬತ್ತು ಗುಡಿಸಲುಗಳನ್ನು ಕೆಡವಿದ್ದಾರೆ, ಅದನ್ನು ಪ್ರತಿಭಟಿಸಿದ ಮಹಿಳೆಯರು ಸೇರಿದಂತೆ ಹಲವಾರು ನಿವಾಸಿಗಳನ್ನು ಥಳಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಅಧಿಕಾರಿಗಳು ಆರೋಪಿಸಿದ್ದಾರೆ.

ಬಿಹಾರ ಮತ್ತು ಪಶ್ಚಿಮ ಬಂಗಾಳದ ಅಂತರರಾಜ್ಯ ಗಡಿಯ ಭಾಗದಲ್ಲಿರುವ ಪಶ್ಚಿಮ ಬಂಗಾಳದ ಹರಿಶ್ಚಂದ್ರಪುರ 2 ಬ್ಲಾಕ್ನ್ ಸದ್ಲಿಚಕ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಮಾಲ್ಡಾ ಜಿಲ್ಲಾಡಳಿತ ಹೇಳಿದೆ.

ಮೂರು ಕುಟುಂಬಗಳಿಗೆ ಸೇರಿದ ಒಟ್ಟು ಒಂಬತ್ತು ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಈ ವಿಷಯವನ್ನು ಬಿಹಾರದ ಕತಿಹಾರ್ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದೆ ಮತ್ತು ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದೆ ಮಾಲ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜರ್ಷಿ ಮಿತ್ರಾ ಹೇಳಿದ್ದಾರೆ.

ತಾವು ತಲೆಮಾರುಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದೇವೆ. ಟಿಎಂಸಿ ಬೆಂಬಲಿಗ ಗಣೇಶ್ ಪ್ರಮಾಣಿಕ್ ಬಿಹಾರ ಪೊಲೀಸ್ ಸಿಬ್ಬಂದಿಗೆ ಲಂಚ ನೀಡಿ ತಮ್ಮ ಆಸ್ತಿಯೊಂದಿಗೆ ಗಡಿ ಹಂಚಿಕೊಂಡಿರುವ ಭೂಮಿಯನ್ನು ತೆರವುಗೊಳಿಸಲು ಧ್ವಂಸಗೊಳಿಸಿದ್ದಾರೆ ಎಂದು ಸಂತ್ರಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಸರ್ಕಾರಿ ಜಾಗವನ್ನು ಬಿಟ್ಟುಕೊಡುವಂತೆ ಗಣೇಶ್ ಸಂತ್ರಸ್ತರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಲ್ದಹಾ ಉತ್ತರ ಬಿಜೆಪಿ ಸಂಸದ ಖಗೇನ್ ಮುರ್ಮು, ಈ ಗ್ರಾಮ ಮತ್ತು ಮೌಜಾ ಪಶ್ಚಿಮ ಬಂಗಾಳದ ವ್ಯಾಪ್ತಿಗೆ ಬರುತ್ತದೆ, ಬಿಹಾರ ರಸ್ತೆಯ ಇನ್ನೊಂದು ಬದಿಯಲ್ಲಿದೆ, ಯಾವುದೇ ಪ್ರಚೋದನೆ ಇಲ್ಲದೆ ಏಕಾಏಕಿ ಬಿಹಾರ ಪೊಲೀಸರು ಈ ಗುಡಿಸಲುಗಳನ್ನು ಕೆಡವಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಈ ಬಡವರು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ, ಕೆಡವಲಾದ ಗುಡಿಸಲುಗಳ ಪಕ್ಕದಲ್ಲಿ ಕೆಲವು ಟಿಎಂಸಿ ಸದಸ್ಯರ ಜಮೀನುಗಳಿವೆ ಎಂಬ ಮಾಹಿತಿ ಇದೆ. ಅದಕ್ಕಾಗಿ ಬಿಹಾರ ಪೊಲೀಸರಿಗೆ ಲಂಚ ನೀಡಿ ಈ ಕೆಲಸ ಮಾಡಿಸಲಾಗಿದೆ. ಆರೋಪಿ ಪೊಲೀಸರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಹರಿಶ್ಚಂದ್ರಾಪುರ ಟಿಎಂಸಿ ಶಾಸಕ ತಜ್ಮುಲ್ ಹೊಸೈನ್ ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಗಣೇಶ್ ಪ್ರಮಾಣಿಕ್ ಅವರ ವಿರುದ್ಧ ಆರೋಪ ಮಾಡಲಾಗುತ್ತಿದ್ದು, ಅವರು ಪಕ್ಷದ ಪದಾಕಾರಿ ಅಲ್ಲ. ಕೇವಲ ಟಿಎಂಸಿ ಬೆಂಬಲಿಗರಾಗಿದ್ದಾರೆ.
ವೈಯಕ್ತಿಕ ಮಟ್ಟದಲ್ಲಿ ನಡೆಸಿದ ಯಾವುದೇ ಕೃತ್ಯಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

Facebook Comments