ಮೋದಿ ಹತ್ಯೆ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಸ್ಕೆಚ್ : ಶಂಕಿತ ಉಗ್ರ ಅರೆಸ್ಟ್

Social Share

ಪಾಟ್ನಾ, ಜು.14- ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಹಾಗೂ ಮುಂದಿನ 25 ವರ್ಷದಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ಕಾರ್ಯಾಚರಿಸುತ್ತಿದ್ದ ಮೂಲಭೂತವಾದಿಗಳ ಗುಂಪನ್ನು ಭೇದಿಸಿರುವ ಪೊಲೀಸರು, ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಹಲವು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದ ನಾಯಟೋಲ ಭಾಗದ ಫುಲ್ವಾರಿ ಶರಿಫ್ ಪ್ರದೇಶದ ಮೇಲೆ ದಾಳಿ ನಡೆಸಿರುವ ಪೊಲೀಸರು, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಗುಪ್ತದಳ ಹಲವು ದಿನಗಳಿಂದ ನಿಗಾ ವಹಿಸಿ ಅನುಮಾನಾಸ್ಪದ ಚಟುವಟಿಕೆಯೊಂದಿಗೆ ಉಗ್ರರ ಗುಂಪು ಅಸ್ತಿತ್ವದಲ್ಲಿರುವ ಬಗ್ಗೆ ಮಾಹಿತಿ ನೀಡಿತ್ತು. ಅದನ್ನು ಆಧರಿಸಿ ಸ್ಥಳೀಯ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜುಲೈ 11ರಂದು ದಾಳಿ ನಡೆಸಿದ್ದವು.

ಸ್ಥಳ ಪರಿಶೀಲನೆ ವೇಳೆ 2047ರ ವೇಳೆ ಭಾರತ ಇಸ್ಲಾಮಿಕ್ ಆಡಳಿತಕ್ಕೆ ಒಳಪಡಲಿದೆ ಎಂಬ ಪಿಟಿಪಿ ದಾಖಲೆಗಳು ಪತ್ತೆಯಾಗಿವೆ. ಜೊತೆಗೆ ಕೆಲವು ಆಕ್ಷೇಪಾರ್ಹ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಪಿಎಫ್‍ಐ ಸಂಘಟನೆಗೆ ಸೇರಿದ 25 ಕರಪತ್ರಗಳು ದೊರೆತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಜು.12ರಂದು ಬಿಹಾರಕ್ಕೆ ಭೇಟಿ ನೀಡುವ ವೇಳೆ ಅವರನ್ನು ಹತ್ಯೆ ಮಾಡಲು ಈ ಗುಂಪು ಸಂಚು ರೂಪಿಸಿತ್ತು ಎನ್ನುವ ಆಘಾತಕಾರಿ ಮಾಹಿತಿ ವಿಚಾರಣೆಯಿಂದ ಹೊರ ಬಿದ್ದಿದೆ. ಪ್ರಧಾನಿ ಭೇಟಿ ವೇಳೆ ಹತ್ಯಾಕಾಂಡ ನಡೆಸಲು ಫುಲ್ವಾರಿ ಶರಿಫ್‍ನಲ್ಲಿ 15 ದಿನ ತರಬೇತಿ ನೀಡಲಾಗಿತ್ತು. ಜುಲೈ 6 ಮತ್ತು 7ರಂದು ಸಭೆ ನಡೆಸಿ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ಮೊಹಮ್ಮದ್ ಜಲಾಲುದ್ದೀನ್ ಜಾರ್ಖಾಂಡ್‍ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ನಿಷೇಧಿತ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಅತ್ತಾರ್ ಪರ್ವೇಜ್ ಪಿಎಫ್‍ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮುಖ್ಯಾಕಾರ ಮನೀಶ್ ಕುಮಾರ್ ತಿಳಿಸಿದ್ದಾರೆ.

ಫುಲ್ವಾರಿ ಶರೀಫ್‍ನಲ್ಲಿ ಆರೋಪಿಗಳು ಯುವಕರಿಗೆ ಖಡ್ಗ, ಚಾಕುಗಳ ಬಳಕೆ ತರಬೇತಿ ನೀಡುತ್ತಿದ್ದರು. ತರಬೇತಿ ಪಡೆದವರನ್ನು ಬಳಸಿಕೊಂಡು ಪಾಟ್ನಾ ಸೇರಿದಂತೆ ಇತರೆಡೆಗಳಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರು. ಈ ಕೇಂದ್ರಕ್ಕೆ ಕೇರಳಮ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಯುವಕರು ಆಗಮಿಸಿ ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ.

ಪೊಲೀಸರು ಈವರೆಗಿನ ವಿಚಾರಣೆಯ ಪ್ರಕಾರ ಈ ತರಬೇತಿ ಕೇಂದ್ರಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ದೇಶಗಳಿಂದ ಆರ್ಥಿಕ ನೆರವು ನೀಡಲಾಗುತ್ತಿತ್ತು. ಆ ಹಣವನ್ನು ದೇಶ ವಿರೋಧಿ ಪ್ರಚಾರಕ್ಕೆ ಬಳಕೆ ಮಾಡಲಾಗುತ್ತಿತ್ತ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article