ಬೈಕ್ ಅಪಘಾತ, ಎಲ್‍ಎಲ್‍ಬಿ ವಿದ್ಯಾರ್ಥಿ ಸಾವು

Social Share

ಬೆಂಗಳೂರು, ಸೆ.19- ಸ್ನೇಹಿತನ ಮನೆಗೆ ಬುಲೆಟ್ ಬೈಕ್‍ನಲ್ಲಿ ಊಟಕ್ಕೆ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹಾಲಿನ ಟ್ಯಾಂಕರ್‍ಗೆ ಅಪ್ಪಳಿಸಿ ಉರುಳಿಬಿದ್ದ ಪರಿಣಾಮ ಎಲ್‍ಎಲ್‍ಬಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಲಿಂಗರಾಜಪುರದ ನಿವಾಸಿ, ಎಲ್‍ಎಲ್‍ಬಿ ವ್ಯಾಸಂಗ ಮಾಡುತ್ತಿದ್ದ ಅರ್ಷಾ ಅನ್ವರ್ (20) ಮೃತಪಟ್ಟ ದುರ್ದೈವಿ.
ರಾತ್ರಿ 8 ಗಂಟೆ ಸುಮಾರಿನಲ್ಲಿ ಅರ್ಷಾ ಅನ್ವರ್ ತನ್ನ ಬುಲೆಟ್ ಬೈಕ್‍ನಲ್ಲಿ ವಿಲ್ಸನ್ ಗಾರ್ಡನ್‍ಗೆ ಹೋಗಿ ಗೆಳೆಯ ಆರ್ಯನ್‍ನನ್ನು ಕರೆದುಕೊಂಡು ಕೋರಮಂಗಲದಲ್ಲಿರುವ ಸ್ನೇಹಿತನ ಮನೆಗೆ ಊಟಕ್ಕೆ ಹೋಗುತ್ತಿದ್ದರು.

ಡೈರಿ ಸರ್ಕಲ್ ಸಮೀಪದ ಚೆಕ್‍ಪೋಸ್ಟ್ ಬಳಿಯ ಡೌನ್‍ರ್ಯಾಂಪ್ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದು ನಂತರ ಹಾಲಿನ ಟ್ಯಾಂಕರ್‍ಗೆ ಅಪ್ಪಳಿಸಿ ಉರುಳಿದೆ.

ಪರಿಣಾಮ ಇಬ್ಬರು ಸವಾರರೂ ಕೆಳಗೆ ಬಿದ್ದಿದ್ದು, ಅರ್ಷಾ ಅನ್ವರ್‍ಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಹಿಂಬದಿ ಸವಾರ ಆರ್ಯನ್ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುದ್ದಿ ತಿಳಿದು ಮೈಕೋ ಲೇಔಟ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article