ಬೆಂಗಳೂರು, ಜ.7- ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿಕೊಂಡು ಬೈಕ್‍ನಲ್ಲಿ ಹಿಂದಿರುಗುತ್ತಿದ್ದಾಗ ಅತಿ ವೇಗದಿಂದಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಸಿವಿಲ್ ಎಂಜಿನಿಯರ್ ಲಕ್ಷ್ಮೀಶ (28) ಮತ್ತು ಲ್ಯಾಬ್ ಟೆಕ್ನೀಷಿಯನ್ ರಾಘವೇಂದ್ರ (26) ಮೃತಪಟ್ಟ ಸವಾರರು. ಇವರಿಬ್ಬರು ಬ್ಯಾಟರಾಯನಪುರದ ನಿವಾಸಿಗಳು.
ಸ್ನೇಹಿತರಾದ ರಕ್ಷಿತ್, ಗೌತಮ್ ಅವರೊಂದಿಗೆ ಲಕ್ಷ್ಮೀಶ ಮತ್ತು ರಾಘವೇಂದ್ರ ರಾತ್ರಿ 9.45ರ ಸುಮಾರಿಗೆ ನಾಗರಬಾವಿಯಲ್ಲಿರುವ ಸೆರ್ಲಾಕ್ ರೆಸ್ಟೋರೆಂಟ್‍ಗೆ ಹೋಗಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿಸಿಕೊಂಡು ನಾಗರಬಾವಿಯಿಂದ ಮನೆಗೆ ಬರಲು ರಕ್ಷಿತ್ ತನ್ನ ಬೈಕ್‍ನಲ್ಲಿ ಗೌತಮ್‍ನನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಲಕ್ಷ್ಮೀಶ ತನ್ನ ಬೈಕ್‍ನಲ್ಲಿ ರಾಘವೇಂದ್ರನನ್ನು ಕೂರಿಸಿಕೊಂಡು ಮನೆಗೆ ತೆರಳುತ್ತಿದ್ದರು.
ಈ ನಾಲ್ವರು ಹೆಲ್ಮೆಟ್ ಧರಿಸಿರಲಿಲ್ಲ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರು. ಮೈಸೂರು ರಸ್ತೆ ಕಡೆಯಿಂದ ಬನಶಂಕರಿ 100 ಅಡಿ ರಿಂಗ್ ರಸ್ತೆ, ಪಿಇಎಸ್ ಕಾಲೇಜು ಸಮೀಪದ ಇಂದಿರಾ ಕ್ಯಾಂಟಿನ್ ಬಳಿ ಬರುತ್ತಿದ್ದಾಗ ರಾತ್ರಿ 10.15ರ ಸುಮಾರಿನಲ್ಲಿ ಲಕ್ಷ್ಮೀಶ ಅವರ ಬೈಕ್ ಅತಿ ವೇಗದಿಂದಾಗಿ ರಿಂಗ್‍ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮ ಇಬ್ಬರೂ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಹಿಂದೆ ಬೈಕ್‍ನಲ್ಲಿ ಬರುತ್ತಿದ್ದ ರಕ್ಷಿತ್ ಮತ್ತು ಗೌತಮ್ ಸಾರ್ವಜನಿಕರ ನೆರವಿನಿಂದ ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದು ಸಮೀಪದ ಎವಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಲಕ್ಷ್ಮೀಶನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ರಾಘವೇಂದ್ರನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಸುದ್ದಿ ತಿಳಿದ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
