ಸೇತುವೆ ದಾಟುವಾಗ ಕೊಚ್ಚಿಹೋದ ಬೈಕ್ ಸವಾರ

Social Share

ಬೆಂಗಳೂರು,ಅ.15- ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಅನಾಹುತ ಸೃಷ್ಟಿಯಾಗಿದ್ದು, ಬೈಕ್ನಲ್ಲಿ ಸೇತುವೆ ದಾಟುವಾಗ ಸವಾರನೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜಾಲಹಳ್ಳಿ-ಇಡಗೂರು ಗ್ರಾಮದ ಮಧ್ಯೆ ಬೈಕ್ನಲ್ಲಿ ಸೇತುವೆ ದಾಟುವಾಗ ಸವಾರರು ಕೊಚ್ಚಿಹೋಗಿದ್ದು, ಮತ್ತೊಬ್ಬನನ್ನು ರಕ್ಷಣೆ ಮಾಡಲಾಗಿದೆ.

ಬೆಂಗಳೂರು, ಮಂಡ್ಯ, ತುಮಕೂರು, ದಾವಣಗೆರೆಗೆ, ಬಾಗಲಕೋಟೆ ಜಿಲ್ಲೆ ಗಳಲ್ಲಿ ಭಾರೀ ಮಳೆಯಿಂದಾಗಿ ಅವಾಂ ತರ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನಕ್ಕೆ ಬೆಂಗಳೂರಿನ 8 ವಲಯಗಳಲ್ಲಿ ಭಾರೀ ಮಳೆಯಾಗಿದೆ. ಯಲಹಂಕ 75.5 ಮಿ.ಮೀ, ಅಟ್ಟೂರು 70 ಮಿ.ಮೀ, ಚೌಡೇಶ್ವರಿ ವಾರ್ಡ್ 67.5 ಮಿ.ಮೀ, ಆರ್.ಆರ್.ನಗರ 66.5 ಮಿ.ಮೀ, ಸಂಪಗಿರಾಮನಗರದಲ್ಲಿ 66 ಮಿ.ಮೀ ಮಳೆ ಸುರಿದಿದೆ.

ತುಮಕೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ. ಮಳೆಯ ನೀರಿನ ರಭಸಕ್ಕೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಶಿರಾ ರಸ್ತೆ ಕೊಚ್ಚಿ ಹೋಗಿದೆ. ವಾಹನ ಸವಾರರು ಪರದಾಡುವಂತಾಗಿದೆ.
ಗುಬ್ಬಿ, ತುಮಕೂರು, ಕೊರಟಗೆರೆ, ತಿಪಟೂರು, ಮಧುಗಿರಿ, ಚಿಕ್ಕನಾಯನಹಳ್ಳಿ, ತುರುವೆಕೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ.

ಎಂ.ಹೆಚ್ ಪಟ್ಟಣ ಬಳಿ ಹಲವು ತೋಟಗಳು ಜಲಾವೃತಗೊಂಡಿವೆ. ಬಹುತೇಕ ಅಡಕೆ ತೋಟಗಳಿಗೂ ನೀರು ನುಗ್ಗಿದೆ. ಇನ್ನು ಮಳೆಯ ನೀರಿನ ರಭಸಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಶಿರಾ ರಸ್ತೆ ಕೊಚ್ಚಿ ಹೋಗಿದೆ. ನಿಟ್ಟೂರು ಹಾಗೂ ಶಿರಾ ರಸ್ತೆ ಸಂಪರ್ಕ ಕಡಿತಗೊಂಡಿದೆ.

ದಾವಣಗೆರೆ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರೆದಿದ್ದು, ತಾಲೂಕಿನ ಅಣಜಿ ಕೆರೆಗೆ ನೀರು ಹೆಚ್ಚಾದ ಹಿನ್ನೆಲೆ ದಾವಣಗೆರೆ-ಜಗಳೂರು ರಾಜ್ಯ ಹೆದ್ದಾರಿ ಸಂಚಾರ ನಿಷೇಸಿ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಕಾಟಕರ ಓಣಿ, ಸುಳಿಬಾವಿ ಓಣಿ, ದೇಸಾಯಿ ಗಲ್ಲಿಯಲ್ಲಿ ಮಳೆಯಿಂದ 10 ಮನೆಗಳಿಗೆ ಹಾನಿಯಾಗಿದೆ. ಮಣ್ಣಿನ ಮನೆಗಳು ಕುಸಿದಿವೆ. ಮತ್ತೊಂದೆಡೆ ನಿರಂತರ ಮಳೆಗೆ 75 ವರ್ಷದ ಬಳಿಕ ದಾವಣಗೆರೆ ತಾಲೂಕಿನ ಆಲೂರು ಗ್ರಾಮದ ಪುರಾತನ ಬಾವಿ ಭರ್ತಿಯಾಗಿದೆ. ಹಿರೇಬಾವಿ ತುಂಬಿದ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ಭಾರಿ ಮಳೆಯಿಂದ ಮನೆಗೆ ನೀರು ನುಗ್ಗಿ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವು ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ.

ಮಕ್ಕಳ ಪಠ್ಯ ಪುಸ್ತಕ, ದಾಖಲೆ ಪತ್ರಗಳು, ದಿನಸಿ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿವೆ. ಬೆಳಗ್ಗಿನ ಉಪಾಹಾರಕ್ಕೂ ಗ್ರಾಮಸ್ಥರು ಪರಿತಪಿಸುತ್ತಿರುವ ವಾತಾವರಣ ಸೃಷ್ಟಿಯಾಗಿದೆ.

Articles You Might Like

Share This Article