ನವದೆಹಲಿ, ಆ.25- ಬಲ್ಕೀಸ್ ಬಾನು ಅತ್ಯಾಚಾರ ಹಾಗೂ ಅವರ ಸಂಬಂಧಿಕರ ಹತ್ಯೆ ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿ ವಿಚಾರಣೆ ಆರಂಭಿಸಿರುವ ಸುಪ್ರಿಂಕೋರ್ಟ್, ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಸಿಪಿಐ (ಎಂ) ಪಾಲಿಟ್‍ಬ್ಯೂರೀ ಸದಸ್ಯರಾದ ಸುಭಾಷಿಣಿ ಆಲಿ, ತೃಣಮೂಲ ಕಾಂಗ್ರೆಸ್‍ನ ಸಂಸದರಾದ ಮಹುವಾ ಹೊಹಿತ್ರಾ ಹಾಗೂ ಇತರ ಮಹಿಳಾ ಪರ ಹೋರಾಟಗಾರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಸನ್ನಡತೆ ಆಧರಿಸಿ ಅಪರಾಗಳ ಬಿಡುಗಡೆ ಕುರಿತು ವಿವರಣೆ ನೀಡುವಂತೆ ನೋಟಿಸ್ ನೀಡಿದೆ. ಅಪರಾಧಿಗಳನ್ನು ಬಿಡುಗಡೆ ಮಾಡುವ ವೇಳೆ ವಿವೇಚನೆಯನ್ನು ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದಿದ್ದಾರೆ.
ಗೋದ್ರಾ ರೈಲು ಹತ್ಯಾಖಾಂಡದ ಬೆನ್ನಲ್ಲೆ ನಡೆದ ಹಿಂಸಾಚಾರದಲ್ಲಿ ಸಾವಿರಾರು ಮಂದಿ ಪ್ರಾಣಕಳೆದುಕೊಂಡರು. 2002 ಮಾರ್ಚ್ 3ರಂದು ಗುಜರಾತ್‍ನ ರಾಕಾಪುರ್ ಗ್ರಾಮದಲ್ಲಿ ಗುಂಪೊಂದು ಬಲ್ಕೀಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿತ್ತು. ಆಕೆಯ ಮೂರು ವರ್ಷದ ಮಗಳನ್ನು ಕೊಲ್ಲಲಾಗಿತ್ತು. ಅವರ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಅತ್ಯಾಚಾರಕ್ಕೆ ಒಳಗಾದಾಗ ಬಲ್ಕೀಸ್ ಬಾನು 21 ವರ್ಷದವಳಾಗಿದ್ದು, ಐದು ತಿಂಗಳ ಗರ್ಭೀಣಿ ಎಂದು ಹೇಳಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿ ಆಧರಿಸಿ 2008ರ ಜನವರಿ 21ರಂದು ವಿಶೇಷ ನ್ಯಾಯಾಲಯ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 15 ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿಗಳನ್ನು ಇತ್ತೀಚೆಗೆ ಆಜಾದಿಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಗುಜರಾತ್ ಸರ್ಕಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದೆ. ಅಂದು ದೆಹಲಿಯ ಕೆಂಪುಕೋಟೆಯ ಮೇಲೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಹಿಳೆಯದ ರಕ್ಷಣೆ, ಹೆಣ್ಣುಮಕ್ಕಳ ಘನತೆ ಪಾಲನೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಘೋಷಿಸಿದ್ದರು.
ಇಂದು ಟ್ವೀಟ್ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಬೇಟಿ ಬಚಾವೋ, ಬೇಟಿ ಪಠಾವೋ ಎಂಬುದು ಸುಳ್ಳು ಘೋಷಣೆ ಎಂದಿದ್ದಾರೆ. ಇಂದು ಮಹಿಳೆಯರ ಗೌರವ ಮತ್ತು ಹಕ್ಕುಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಬಲ್ಕೀಸ್ ಬಾನು ಅವರಿಗೆ ನ್ಯಾಯ ದೊರೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.