ಮಹಾರಾಷ್ಟ್ರ,ಫೆ.18- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೌಲ್ಟ್ರಿ ಫಾರಂನಲ್ಲಿ ಇದ್ದಕ್ಕಿದ್ದಂತೆ ನೂರಾರು ಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಸುಮಾರು 25 ಸಾವಿರ ಕೋಳಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ.
ಥಾಣೆಯ ಶಹಪುರ ತಾಲ್ಲೂಕಿನ ವೇಹೊಲ್ಲಿ ಗ್ರಾಮದ ಪೌಲ್ಟ್ರಿ ಫಾರಂನಲ್ಲಿ ನೂರಕ್ಕೂ ಹೆಚ್ಚು ಕೋಳಿಗಳು ದಿಢೀರ್ ಸಾವನ್ನಪ್ಪಿದ್ದು, ಆತಂಕ ಸೃಷ್ಟಿಸಿದೆ. ಅವುಗಳ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಥಾಣೆ ಜಿಲ್ಲಾಧಿಕಾರಿ ರಾಜೇಶ್ ಜೆ.ನಾವೆರ್ಕರ್ ತಿಳಿಸಿದ್ದಾರೆ.
ವೇಹೊಲ್ಲಿ ಗ್ರಾಮ ಪೌಲ್ಟ್ರಿ ಫಾರಂನಲ್ಲಿ ನೂರು ಕೋಳಿಗಳು ಸಾವನ್ನಪ್ಪಿದ್ದು, ಗ್ರಾಮದ ಸುಮಾರು ಒಂದು ಕಿಲೋ ಮೀಟರ್ ಸುತ್ತಲಿನ ಪ್ರದೇಶಗಳಲ್ಲಿನ ಪೌಲ್ಟ್ರಿ ಫಾರಂಗಳಲ್ಲಿರುವ 25 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಕೊಲ್ಲಲಾಗುತ್ತದೆ ಎಂದು ತಿಳಿಸಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಶು ಸಂಗೋಪನಾ ಇಲಾಖೆಗೆ ಸೂಚಿಸಲಾಗಿದೆ. ಹಕ್ಕಿಜ್ವರದ ಭೀತಿ ಇಲ್ಲಿನ ಜನರನ್ನು ಕಾಡುತ್ತಿದ್ದು, ಎವಿಎನ್ ಇನ್‍ಫ್ಲೂಯೆಂಜಾ ಅಥವಾ ಬರ್ಡ್ ಫ್ಲೂ ಎಂದು ಕರೆಯಲ್ಪಡುವ ಹಕ್ಕಿಜ್ವರ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
