ಬೆಂಗಳೂರು, ಆ.7- ರಾಜ್ಯದಲ್ಲಿ ಭಾರೀ ಮಳೆಯಿಂದ ನೆರೆಹಾವಳಿ ಉಂಟಾಗಿ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಬಾರದು ಎಂದು ಸಾರಿಗೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಿತೈಷಿಗಳೇ, ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನೇಕ ಜನ ಪ್ರಾಣ ಕಳೆದುಕೊಂಡು ಆಸ್ತಿ – ಪಾಸ್ತಿ ನಾಶವಾಗಿ ಸಂಕಷ್ಟದಲ್ಲಿದ್ದಾರೆ.
ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಹಾರ ತುರಾಯಿ ಹಾಕಿ, ಕೇಕ್ ಕತ್ತರಿಸಿ ಹುಟ್ಟುಹಬ್ಬ ಮಾಡುವುದು ಬೇಡ ಎಂದು ಕೋರಿಕೊಂಡಿದ್ದಾರೆ.
ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ-ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗಿ. ನನ್ನ ಮೇಲೆ ಅಭಿಮಾನ ಇರುವ ಹಾಗೂ ನನಗೆ ಪ್ರೀತಿ ತೋರುವ ಎಲ್ಲರೂ ನನ್ನ ಈ ಮನವಿಗೆ ಸ್ಪಂದಿಸುವಿರಿ ಎಂದು ನಂಬಿದ್ದೇನೆ. ನಿಮ್ಮಅಭಿಮಾನಕ್ಕೆ ಸದಾ ಚಿರಋಣಿ ಎಂದು ಅಭಿಮಾನಿಗಳು, ಹಿತೈಷಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಭಾವನಾತ್ಮಕವಾಗಿ ಅವರು ಹೇಳಿದ್ದಾರೆ.