ಬಿಸ್ಕೆಟ್ ಉದ್ಯಮದ ನೆಪದಲ್ಲಿ1 ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದ ಎಂಕಾಮ್ ಪದವೀಧರ

Spread the love

ಬೆಂಗಳೂರು,ಮೇ 24- ಬಿಸ್ಕೆಟ್ ಬಿಸ್ನೆಸ್‍ಗೆಂದು ನಂಬಿಸಿ ಪರಿಚಯಸ್ಥರು ಹಾಗೂ ನೆರೆ ಹೊರೆಯವರ ಬಳಿ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಹಣ ಪಡೆದು ತಲೆ ಮರೆಸಿಕೊಂಡಿದ್ದ ಎಂಕಾಮ್ ಪದವೀಧರನನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಂಜಾಂಭ ಅಗ್ರಹಾರದ ನಿವಾಸಿ ಮನೋಜ್‍ರಾವ್ (29) ಬಂಧಿತ ಎಂಕಾಮ್ ಪದವೀಧರ. ಬಿಸ್ಕೆಟ್ ಉದ್ಯಮಕ್ಕಾಗಿ ಬಂಡವಾಳ ಬೇಕೆಂದು ಈತ ಪರಿಚಯಸ್ಥರು, ಅಕ್ಕಪಕ್ಕದವರಿಗೆ ನೀವು ಹಣ ಕೊಟ್ಟರೆ ಲಾಭಾಂಶ ಕೊಡುವುದಾಗಿ ನಂಬಿಸಿ ದ್ದಾನೆ. ಈತನ ಮಾತನನ್ನು ನಂಬಿದ ಕುಮುದಾ ಎಂಬುವರು 21 ಲಕ್ಷ ಹಣವನ್ನು ಮನೋಜ್‍ರಾವ್‍ಗೆ ಕೊಟ್ಟಿದ್ದಾರೆ. ನಂತರದ ದಿನಗಳಲ್ಲಿ ಈತ ಅವರಿಗೆ ಲಾಬಾಂಶವೂ ನೀಡಿಲ್ಲ. ಅಸಲು ಕೊಟ್ಟಿಲ್ಲ. ಹಣ ಹಿಂದಿರುಗಿಸುವಂತೆ ಕೇಳಿದಾಗ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಕುಮುದಾ ಅವರು ಕೆಂಪೇಗೌಡನಗರ ಪೊಲೀಸ್ ಠಾಣೆಗೆ ಮನೋಜ್‍ರಾವ್ ಸೇರಿದಂತೆ ಆತನ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ಇದೇ ರೀತಿ ಮನೋಜ್‍ರಾವ್ ಬಿಸ್ಕೆಟ್ ಉದ್ಯಮಕ್ಕೆಂದು ನಾಗೇಶ್‍ರಾವ್ ಎಂಬುವವರಿಂದ 11.50 ಲಕ್ಷ ರೂ. ಪಡೆದಿದ್ದಾನೆ. ನಾಗೇಶ್ ಅವರು ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿರುವ ಬಗ್ಗೆ ಅವರೂ ಸಹ ದೂರು ನೀಡಿದ್ದಾರೆ.

ಇವರಿಬ್ಬರೂ ಸೇರಿದಂತೆ ಐದು ಮಂದಿಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನಂಜಾಂಭ ಅಗ್ರಹಾರಕ್ಕೆ ತೆರಳಿ ಆತನ ಮನೆ ಬಳಿ ಹೋದಾಗ ಮನೆಗೆ ಬೀಗ ಹಾಕಿತ್ತು.

ಮನೋಜ್ ತಲೆ ಮರೆಸಿಕೊಂಡಿರುವುದನ್ನು ಅರಿತ ಪೊಲೀಸರು ತನಿಖೆ ಕೈಗೊಂಡು ಆತ ಇರುವ ಜಾಗವನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Facebook Comments