ಬೆಂಗಳೂರು,ಫೆ.21- ಶಿವಮೊಗ್ಗದಲ್ಲಿ ಬಜರಂಗದಳದ ಮಾಜಿ ಕಾರ್ಯಕರ್ತನ ಕೊಲೆ ಘಟನೆ ಹಿಂದೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕೈವಾಡ ಇದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.ವಿಧಾನಪರಿಷತ್‍ನ ಕಲಾಪ ಆರಂಭವಾಗುತ್ತಿದ್ದಂತೆ ಬಿ.ಕೆ.ಹರಿಪ್ರಸಾದ್ ಅವರು ಶಿವಮೊಗ್ಗದಲ್ಲಿ ಹರ್ಷ ಅವರ ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ, ಘಟನೆಯ ಬಗ್ಗೆ ಹೈಕೋರ್ಟ್‍ನ ನ್ಯಾಯಾಧೀಶರಿಂದ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ನಿನ್ನೆ ರಾತ್ರಿ ಹರ್ಷ ಅವರ ಕೊಲೆಯಾಗಿದೆ. ಎರಡು ವರ್ಷಗಳ ಹಿಂದೆ ಅವರ ತಾಯಿ ತನ್ನ ಮಗ ಬಜರಂಗದಳದಲ್ಲಿ ಸಕ್ರಿಯವಾಗಿಲ್ಲ ಎಂದು ಶಿವಮೊಗ್ಗದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಬರೆದುಕೊಟ್ಟಿದ್ದರು. ಈಶ್ವರಪ್ಪ ರಾಜ್ಯದ ಮಂತ್ರಿಯಾಗಿದ್ದಾರೆ. ಗೃಹ ಸಚಿವರೂ ಅದೇ ಜಿಲ್ಲೆಯವರಾಗಿದ್ದಾರೆ.
ಪೊಲೀಸರು ತನಿಖೆ ನಡೆಸುವ ಮೊದಲೇ ಈಶ್ವರಪ್ಪ ಅವರು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಶಾಂತಿ ಕದಡುವ ಪ್ರಯತ್ನ. ತ್ರಿವರ್ಣ ಧ್ವಜ ಕುರಿತಂತೆ ರಾಷ್ಟ್ರ ವಿರೋ ಹೇಳಿಕೆ ನೀಡಿ ರಾಜೀನಾಮೆ ನೀಡಬೇಕಾದ ಸಂಕಷ್ಟದಲ್ಲಿರುವ ಈಶ್ವರಪ್ಪ ಅವರು ಅದರಿಂದ ತಪ್ಪಿಸಿಕೊಳ್ಳಲು ಹರ್ಷ ಅವರ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಇದು ಸದನದ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ತೇಜಸ್ವಿನಿ, ಎಂ.ಕೆ.ಪ್ರಾಣೇಶ್ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದರು.ಆದರೆ, ತಮ್ಮ ಹಿಂದೆ ಸರಿಯದ ಬಿ.ಕೆ.ಹರಿಪ್ರಸಾದ್ ಅವರು, ಕೊಲೆಗಡುಕ ಈಶ್ವರಪ್ಪರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಈ ಹಂತದಲ್ಲಿ ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ಮನವಿ ಮಾಡಲು ಎದ್ದು ನಿಂತಾಗ ಸರ್ಕಾರದ ಹೇಳಿಕೆ ಬಳಿಕ ತಮಗೂ ಮಾತನಾಡಲು ಅವಕಾಶ ನೀಡಬೇಕೆಂದು ಹರಿಪ್ರಸಾದ್ ಪಟ್ಟು ಹಿಡಿದರು.
ಸಭಾನಾಯಕರು ಸರ್ಕಾರ ಎಲ್ಲ ವಿಚಾರಗಳ ಚರ್ಚಿಗೆ ಸಿದ್ದವಿದೆ. ಪ್ರತಿ ಪಕ್ಷ ಕಾಂಗ್ರೆಸ್ ಮೊದಲು ಧರಣಿ ಕೈ ಬಿಟ್ಟು ಸುಗಮ ಕಲಾಪಕ್ಕೆ ಸಹಕಾರ ನೀಡಲಿ ಎಂದು ಮನವಿ ಮಾಡಿದರು.ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಸದಸ್ಯರು, ಧರಣಿ ಮುಂದುವರೆಸಿ ಗದ್ದಲ, ಕೋಲಾಹಲ ಎಬ್ಬಿಸಿದರು. ಗಲಾಟೆ ನಡುವೆಯೇ ಬಿ.ಕೆ.ಹರಿಪ್ರಸಾದ್ ಅವರು, ಸರ್ಕಾರದ ವತಿಯಿಂದ ನನ್ನ ಪ್ರಶ್ನೆಗೆ ಉತ್ತರ ಬಂದಿಲ್ಲ.
ಶಿವಮೊಗ್ಗದಲ್ಲಿ ಹರ್ಷ ಅವರ ಕೊಲೆಯಾಗಿದೆ. ಈಶ್ವರಪ್ಪ ನೇರವಾಗಿ ಅಥವಾ ಪ್ರತ್ಯೇಕ್ಷವಾಗಿ ಕಾರಣರಾಗಿದ್ದಾರೆ. ತನಿಖೆ ಮೊದಲೇ ಅವರು ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಘಟನೆ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದ್ದಂತೆ ಇದೆ. ಈ ಮೊದಲು ಪರೇಶ್ ಮಹತಾ ಕೊಲೆ ಪ್ರಕರಣದಲ್ಲೂ ಇದೇ ರೀತಿಯಾಗಿತ್ತು ಎಂದು ಹರಿಪ್ರಸಾದ್ ಅವರು ಗಂಭೀರ ಆರೋಪ ಮಾಡಿದರು.ಆಡಳಿತ ಪಕ್ಷದ ಸದಸ್ಯರು ಇದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿ ಗದ್ದಲ-ಕೋಲಾಹಲ ನಡೆಸಿದರು.
