ಅತಂತ್ರ ಸ್ಥಿತಿಯಲ್ಲಿ ಬಿಜೆಪಿಯ 20 ಶಾಸಕರು

Social Share

ಬೆಂಗಳೂರು,ಜ.30- ಇಲ್ಲೂ ಇರಲ್ಲಾರೆ, ಅಲ್ಲಿಗೂ ಹೋಗಲಾರೆ.. ಇದು ರಾಜ್ಯ ಬಿಜೆಪಿ ಯಲ್ಲಿನ ಕೆಲವು ಸಚಿವರೂ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರನ್ನು ಕಾಡುತ್ತಿರುವ ಸಮಸ್ಯೆ. ನಾನಾ ಕಾರಣಗಳಿಗಾಗಿ ಬಿಜೆಪಿಯಲ್ಲಿ ಇರಲು ಬಹಳಷ್ಟು ಶಾಸಕರಿಗೆ ಆಗುತ್ತಿಲ್ಲ. ಕೆಲವರಿಗೆ ತಮ್ಮ ರಾಜಕೀಯ ಭವಿಷ್ಯದ ಚಿಂತೆ ಉಳಿದವರಿಗೆ ಈ ಬಾರಿ ಸ್ಪರ್ಧೆಗೆ ಪಕ್ಷದ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಅನುಮಾನ. ಹೀಗಾಗಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರನ್ನು ಕೈಬಿಟ್ಟು ಗೆಲ್ಲುವ ಸಾಧ್ಯತೆ ಇರುವ ಒಂದಷ್ಟು
ಹೊಸ ಮುಖಗಳಿಗೆ ಟಿಕೆಟ್ ಕೊಡುವ ನಿರೀಕ್ಷೆಯಿದೆ. ಇನ್ನುಳಿದಂತೆ ಮೂರಕ್ಕೂ ಹೆಚ್ಚುಬಾರಿ ಒಂದೇ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿರುವರ ಪೈಕಿ ಕೆಲವರನ್ನು ಬೇರೆ ಕ್ಷೆತ್ರಗಳಿಂದ ಸ್ರ್ಪಧಿಸುವಂತೆ ಸೂಚಿಸುವ ಸಂಭವವಿದೆ.

ಈ ಪಟ್ಟಿಯಲ್ಲಿ ಕೆಲವು ಮಂತ್ರಿಗಳೂ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಸಂಬಂಧ ಕೆಲವರಿಗೆ ಪಕ್ಷದ ಹೈಕಮಾಂಡ್ ನಿಂದ ಸೂಚನೆಯೂ ಬಂದಿದ್ದು, ಇದು ಕಳವಳಕ್ಕೆ ಕಾರಣವಾಗಿದೆ.

ಕಾಶ್ಮೀರದ ಹಿಮಸೌಂದರ್ಯಕ್ಕೆ ಮಾರುಹೋದ ಕಾಂಗ್ರೆಸ್ ನಾಯಕರು

ಈಗಿರುವ ಸುರಕ್ಷಿತ ಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರದಿಂದ ಚುನಾವನೆಗೆ ಸ್ರ್ಪಧಿಸುವುದೆಂದರೆ ಅದು ಈಗಿನ ಸನ್ನಿವೇಶದಲ್ಲಿ ಅಸಾಧ್ಯದ ಮಾತು. ಹಾಗೆಂದು ಪಕ್ಷದ ವರಿಷ್ಠರ ಸೂಚನೆಯನ್ನು ಪಾಲಿಸದೇ ಇದ್ದಲ್ಲಿ ಚುನಾವಣೆಯಲ್ಲಿ ಸ್ರ್ಪಧಿಸಲೂ ಪಕ್ಷದ ಟಿಕೆಟ್ ಸಿಗುವುದಿಲ್ಲ, ಮತ್ತೆ ಅಧಿಕಾರ ಪಡೆಯುವ ಆಸೆ ದೂರವೇ ಉಳಿದಂತಾಗುತ್ತದೆ.

ಮೂಲ ಬಿಜೆಪಿಯವರಲ್ಲದ , ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಬಿಜೆಪಿಗೆ ಬಂದು ಶಾಸಕರು, ಸಚಿವರಾದ ಇನ್ನುಳಿದ ಕೆಲವರಿಗೆ ವಾಪಸು ಕಾಂಗ್ರೆಸ್‍ಗೆ ಹೋಗುವ ಆಸೆ ಇದೆ. ಈ ಪೈಕಿ ಕೆಲವರಿಗೆ ಕಾಂಗ್ರೆಸ್ ಪಕ್ಷದಿಂದ ಮುಕ್ತ ಆಹ್ವಾನವೂ ಬಂದಿದೆ.

ಆದರೆ ಕಾಂಗ್ರೆಸ್ ಪಕ್ಷದ ಸ್ಥಿತಿಯೇ ಸರಿ ಇಲ್ಲ. ಮುಖ್ಯಮಂತ್ರಿ ಹುದ್ದೆಯ ರೇಸ್‍ನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ತಮ್ಮ ತಮ್ಮ ಬಲಾಬಲಗಳನ್ನು ಬಳಸಿಕೊಂಡು ಕಾಲೆಳೆಯುವ ತಂತ್ರ ಅನುಸರಿಸಲು ಮುಂದಾಗಬಹುದೆಂಬ ವದಂತಿ ಇದೆ. ಈ ಪರಿಸ್ಥಿತಿಯಲ್ಲಿ ಚುನಾವಣೆ ಸಮೀಪಿಸಿರುವಂತೆ ರಾಜ್ಯ ರಾಜಕಾರಣ ಹೊಸ ಕವಲುಗಳನ್ನು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರದ ಮಾಜಿ ಸಚಿವ ಹಾಲಿ ವಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಡುವಿನ ಸಂಘರ್ಷಕ್ಕೆ ಪಕ್ಷದ ವರಿಷ್ಠರು ಮುಂದಾಗಿದ್ದು, ಸಂಭವನೀಯ ಅಪಾಯಗಳ ಬಗ್ಗೆ ಅರಿತಿರುವ ಬಿಜೆಪಿ ವರಿಷ್ಠರು ಸದ್ಯಕ್ಕೆ ಮೌನ ವಹಿಸುವಂತೆ ಯತ್ನಾಳ್‍ಗೆ ಸೂಚಿಸಿದ್ದಾರೆ.

ಆದರೆ ಈ ತೇಪೆ ರಾಜಕಾರಣದ ಸೂತ್ರದಿಂದ ಯಡಿಯೂರಪ್ಪ ತಣ್ಣಗಾಗುವ ಸಾಧ್ಯತೆಗಳು ಕಡಿಮೆ. ಯತ್ನಾಳ್ ವಿರುದ್ಧ ಕಟ್ಟು ನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ಅದು ಈಡೇರಿಲ್ಲ.

ಈಗಿನ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೇ ನಡೆಸಿರುವ ಎರಡು ಸಮೀಕ್ಷೆಗಳಲ್ಲಿ ಪಕ್ಷಕ್ಕೆ ಬಹುಮತ ಸಿಗುವುದು ಕಷ್ಟ ಎಂಬ ಅಂಶ ಗೋಚರವಾಗಿದೆ. ಈಗಾಗಲೇ ಈ ಸಮೀಕ್ಷೆಯ ಅಂಶಗಳು ಬಹಿರಂಗವಾಗಿದ್ದು ಅಧಿಕಾರದ ಆಸೆಯಲ್ಲಿರುವ ಅನೇಕರಿಗೆ ಆತಂಕ ತಂದೊಡ್ಡಿದೆ.

ಬೆಂಗಳೂರಿನಲ್ಲೂ ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರಸಾರ

ಇದೇ ವೇಳೆ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಿ ಅಧಿಕಾರಕ್ಕೆ ಬರುವ ಆಲೋಚನೆ ಹೊಂದಿರುವ ಕಾಂಗ್ರೆಸ್ ಇದೀಗ ಈ ಹಿಂದೆ ನಾನಾ ಕಾರಣಗಳಿಗೆ ಪಕ್ಷ ತೊರೆದವರಿಗೆ ಮರಳಿ ವಾಪಸಾಗುವಂತೆ ಆಹ್ವಾನ ನೀಡಿರುವುದು ಬಿಜೆಪಿಯಲ್ಲಿದ್ದು ತಳಮಳ ಅನುಭವಿಸುತ್ತಿರುವ ಬಹಳಷ್ಟು ವಲಸಿಗ ಸಚಿವರು, ಶಾಸಕರನ್ನು ಅತ್ತ ನೋಡುವಂತೆ ಪ್ರೇರೇಪಿಸಿದೆ.

ಆದರೆ ಬಹಳಷ್ಟು ಶಾಸಕರು, ಸಚಿವರನ್ನು ಕಾಡುತ್ತಿರುವ ಭಯ ಎಂದರೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರಿದರೆ ಅದಕ್ಕೆ ಕೇಂದ್ರದಲ್ಲಿರುವ ತನ್ನ ಅಕಾರವನ್ನು ಬಿಜೆಪಿ ಬಳಸಿಕೊಂಡು ತಮ್ಮ ವಿರುದ್ಧ ಆದಾಯ ತೆರಿಗೆ ದಾಳಿ ನಡೆಸಬಹುದು. ಆಗ ಚುನಾವಣೆ ಎದುರಿಸುವುದಕ್ಕಿಂತ ಹೆಚ್ಚಾಗಿ ಆದಾಯ ತೆರಿಗೆ ದಾಳಿಯಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ಎದುರಿಸಲು ಸಮಯ ವ್ಯರ್ಥವಾಗುತ್ತದೆ.

ರಾಮನ ಹೆಸರಿನಲ್ಲಿ ಲಾಭ ಪಡೆಯಲು ಎಸ್‍ಪಿ ಷಡ್ಯಂತ್ರ ; ಮಾಯಾವತಿ

ಹೀಗಾಗಿ ಸದ್ಯಕ್ಕೆ ಬಿಜೆಪಿಯಲ್ಲೇ ಇದ್ದು ಟಿಕೆಟ್ ಪಡೆದು ಚುನಾವಣೆ ಗೆಲ್ಲುವುದು ಚುನಾವಣೆ ಫಲಿತಾಂಶದ ನಂತರ ಉದ್ಬವಿಸುವ ರಾಜಕೀಯ ಪರಿಸ್ಥಿತಿಯನ್ನುನೋಡಿ ಮುಂದಿನ ತೀರ್ಮಾನ ಕೈಗೊಳ್ಳುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

BJP, 20 MLAs, party ticket, assembly election,

Articles You Might Like

Share This Article